Tuesday, October 7, 2025

Latest Posts

ನವಿಲು ಗರಿ ಬಳಸಬಹುದು ಎಂದ ಈಶ್ವರ ಖಂಡ್ರೆ; ದರ್ಗಾ, ಮಸೀದಿಗಳಿಗಿಲ್ಲ ಕಾನೂನು ತೊಡಕು

- Advertisement -

ಬೆಂಗಳೂರು: ನವಿಲು ಗರಿಗಳನ್ನು ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅವುಗಳ ರಫ್ತು ಮಾಡುವಂತೆ ಇಲ್ಲ. ಬಿಜೆಪಿಯವರು ಸಮಾಜದ ಸಾಮರಸ್ಯವನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಈ ಮೂಲಕ ದರ್ಗಾ, ಮಸೀದಿಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಿರುವ ಮೌಲ್ವಿಗಳಿಗೆ ಯಾವುದೇ ರೀತಿಯ ಕಾನೂನು ತೊಡಕು ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ಹುಲಿ ಉಗುರು ಪ್ರಕರಣ ದಿನೇ ದಿನೆ ಕಾವು ಪಡೆದುಕೊಳ್ಳುತ್ತಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.

ನವಿಲು ಗರಿಗಳನ್ನು ದರ್ಗಾ ಹಾಗೂ ಮಸೀದಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೌಲ್ವಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಮಾಡಿರುವ ಪ್ರಶ್ನೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, ಸೆಕ್ಷನ್ 43ರಡಿಯಲ್ಲಿ ವನ್ಯಜೀವಿ ಕಾಯ್ದೆ 72 ಇದ್ದು, ಈ ಕಾಯ್ದೆಯಲ್ಲಿ ನವಿಲು ಗರಿಗಳಿಗೆ ವಿನಾಯಿತಿ ಇದೆ. ಇವುಗಳನ್ನು ರಪ್ತು ಮಾಡುವಂತಿಲ್ಲ. ಬಿಜೆಪಿಯವರು ಯಾವುದೇ ಕಾಯ್ದೆ ಜಾರಿ ಮಾಡಿಲ್ಲ ಎಂದು ಹೇಳಿದರು.

ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ, ಅವರ ಕಾಲದಲ್ಲಿ ಮಲಗಿದ್ದರು. ಈಗ ಜಾರಿ ಮಾಡುವ ಸಂದರ್ಭದಲ್ಲಿ ಸಲಹೆ, ಸೂಚನೆಯನ್ನು ನೀಡಲಿ. ಇದಕ್ಕೂ ಧಾರ್ಮಿಕ ಭಾವನೆ ಕೆರಳಿಸಬೇಕು. ಸಮಾಜದ ಸಾಮರಸ್ಯ ಕದಡಬೇಕು ಎಂದಾದರೆ ಬಿಜೆಪಿ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಂದ ಈ ರೀತಿ ಹೇಳಿಕೆಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಮರಳಿ ಕೊಡಲು 2 ತಿಂಗಳು ಕಾಲಾವಕಾಶ

ವನ್ಯಜೀವಿ ಉತ್ಪನ್ನ ವಾಪಸ್ ಪಡೆಯಲು 2003 ರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. 6 ತಿಂಗಳಲ್ಲಿ ವಾಪಸ್ ಮಾಡಲು ಅವಕಾಶ ಕೊಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ನಾವು ವಾಪಸ್ ಪಡೆಯಲು ಮುಂದಾಗಿದ್ದೇವೆ. ಮರಳಿ ಕೊಡಲು ಎರಡು ತಿಂಗಳು ಕಾಲಾವಕಾಶ ಕೊಟ್ಟು, ಇದನ್ನು ಸರಿ‌ಪಡಿಸುವ ಚಿಂತನೆಯಿದೆ. ಕಾನೂನು ತಜ್ಞರ ಜತೆಗೆ ಸಮಾಲೋಚನೆ ಮಾಡಿ ಅಂತಿಮ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಅವರ ಸಲಹೆ, ಸೂಚನೆ ಮೇರೆಗೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಕಾಯ್ದೆ ಪ್ರಕಾರ ಯಾವುದೇ ವನ್ಯಜೀವಿಗಳ ಉತ್ಪನ್ನಗಳ ಸಂಗ್ರಹಣೆ, ಮಾರಾಟ, ಸಾಗಾಣಿಕೆ, ಬಳಕೆ‌ ಮಾಡುವುದು ಶಿಕ್ಷಾರ್ಹ ಅಪರಾಧ ಆಗಿದೆ. 3 ವರ್ಷಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ, 25 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ದಂಡ ಹಾಕಲು ಅವಕಾಶ ಇದೆ ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.

ಹುಲಿ ಉಗುರು, ಆನೆಯ ದಂತ, ಜಿಂಕೆಯ ಚರ್ಮ ಯಾವುದೇ ವಸ್ತುಗಳು ಬಳಕೆ ಮಾಡುವಂತಿಲ್ಲ. ವನ್ಯಜೀವಿಗಳು ಸತ್ತ ಮೇಲೂ ಸಂಪೂರ್ಣವಾಗಿ ಸರ್ಕಾರದ ವಶದಲ್ಲಿ ಇರಬೇಕು ಎಂದು ಕಾನೂನು ಇದೆ. ಯಾರೂ ಬಳಸುವಂತಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕಾನೂನು ಎಲ್ಲರಿಗೂ ಒಂದೇ
ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಬಿಗ್‌ಬಾಸ್ ಪ್ರಕರಣದಿಂದ ಮಾತ್ರ ಪ್ರಾರಂಭ ಆಗಿದೆ ಎಂದಲ್ಲ. ನಮ್ಮ ಇಲಾಖೆ ವತಿಯಿಂದ ಅನೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ವರ್ತೂರು ಸಂತೋಷ್ ಬಿಗ್‌ಬಾಸ್‌ನಲ್ಲಿ ಇದ್ದ ಕಾರಣ ಪ್ರಚಾರ ಆಗಿದೆ. ಈಗ ಹೆಚ್ಚಿನ ದೂರುಗಳು ಬಂದಿವೆ. ಜನರ ದೃಷ್ಟಿಯಿಂದ ಒಂದು ಅವಕಾಶ ಕೊಡಬೇಕಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು

ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, ಒಬ್ಬರ ಮೇಲೆ ಒಬ್ಬರಂತೆ ಕೆಳ ಹಂತದಲ್ಲಿ ಆರೋಪವಿತ್ತು. ಆರೋಪದ ತನಿಖೆ ಮಾಡಲು ಸೂಚನೆ ಕೊಟ್ಟಿದ್ದೇನೆ. ಅರಣ್ಯ ಇಲಾಖೆಯ ಅಧಿಕಾರಿಗಳೇ ಬಳಕೆ‌ ಮಾಡಿದ್ದರೆ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್‌

Reporter: ಬ್ರಿಟನ್ ಮಾಜಿ ಪ್ರಧಾನಿ ಈಗ ನ್ಯೂಸ್‌ ಚಾನೆಲ್‌ನಲ್ಲಿ ಆ್ಯಂಕರ್!

Chilli: ಮೆಣಸಿನಕಾಯಿ ಬೆಳೆ ಉಳಿಸಲು ಹೊಸ ಮಾರ್ಗ ಕಂಡುಕೊಂಡ ಕೊಪ್ಪಳದ ರೈತ!

- Advertisement -

Latest Posts

Don't Miss