ಸ್ಯಾಂಡಲ್ವುಡ್ ನಟ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಚಿರು ನಿಧನಕ್ಕೆ ಗಣ್ಯರು ಸಂತಾಪ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್, ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಮೇಘನಾ ಹಾಗೂ ಸರ್ಜಾ ಕುಟುಂಬದವರಿಗೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಕನ್ನಡದ ಖ್ಯಾತ ಕಲಾವಿದ, ಶ್ರೀ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಕೇವಲ 39 ವರ್ಷದ ವಯಸ್ಸಿನಲ್ಲಿ ಅಕಾಲಿಕವಾಗಿ ವಿಧಿವಶರಾಗಿರುವುದು ದಿಗ್ಭ್ರಮೆ ಮೂಡಿಸಿದೆ. ದೇವರು ಅವರಿಗೆ ಸದ್ಗತಿಯನ್ನು, ಅವರ ಕುಟುಂಬ, ಅಪಾರ ಅಭಿಮಾನಿ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ನೋವುಂಟುಮಾಡಿದೆ. ಇನ್ನಷ್ಟು ಕಾಲ ನಟಿಸುತ್ತಾ, ಎಲ್ಲರನ್ನು ರಂಜಿಸುತ್ತಾ ನಮ್ಮ ನಡುವೆ ಈ ಹುಡುಗ ಇರಬೇಕಿತ್ತು. ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅಂಬರೀಷ್, ಚಿರಂಜೀವಿ ಸರ್ಜಾ, ಅತೀ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದು,ತುಂಬಾ ನೋವಿನ ಸಂಗತಿ. ನನ್ನ ಕುಟುಂಬಕ್ಕೂ ಅವರು ಅತೀ ಹತ್ತಿರದವರು.ಚಿರು ಅಗಲಿಕೆ ನನಗೆ , ಅಭಿಗೆ ಅಪಾರ ನೋವನ್ನುಂಟು ಮಾಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವನ್ನು ಭರಿಸುವಶಕ್ತಿಯನ್ನು ಭಗವಂತ ನೀಡಲಿ ಎಂದಿದ್ದಾರೆ.