ಬೆಂಗಳೂರಿನಲ್ಲಿ ಎರೆಹುಳು ಘಟಕ ನಿರ್ಮಾಣ

ಭೂಮಿಯಲ್ಲಿ ನೀರಿನ ಇಂಗುವಿಕೆ ಕಾರ್ಯ, ಸಸಿಗಳು ಮತ್ತು ಗಿಡಗಳ ಬೇರುಗಳು ಭೂಮಿಯಲ್ಲಿ ಆಳವಾಗಿ ಬೇರೂರುವಂತೆ ಮಾಡಲು ಮತ್ತು ಗಿಡಗಳಿಗೆ ಬೇಕಾದ ಯೂರಿಯಾವನ್ನು ಉತ್ಪತ್ತಿ ಮಾಡಿಕೊಳ್ಳಲು ಎರೆಹುಳುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಎರೆಹುಳುವನ್ನು ರೈತರ ಮಿತ್ರ ಎಂದೇ ಕರೆಯಲಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 774 ಉದ್ಯಾನವನಗಳಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಸಲುವಾಗಿ ಎರೆಹುಳುಗಳನ್ನು ಪೂರೈಸುವ ಕಾರ್ಯ ಅತ್ಯಾವಶ್ಯಕವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಮಾದರಿ ವಾರ್ಡ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಮತ್ತು ಈಗಾಗಲೇ 39 ವಿಭಿನ್ನ ವಿಶಿಷ್ಟ ಯೋಜನೆಗಳನ್ನು ಸಾಕಾರಗೊಳಿಸಿರುವ ಯಡಿಯೂರು ವಾರ್ಡ್‌ನಲ್ಲಿ ಎರೆಹುಳು ಘಟಕವನ್ನು ಪಾಲಿಕೆಯ ವತಿಯಿಂದ ನಿರ್ಮಿಸಲಾಗಿದೆ.

ಯಡಿಯೂರು ವಾರ್ಡ್ ನ ಜಯನಗರ 6ನೇ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮಣ್ ರಾವ್ ಬುಲೇವಾಡ್ ‘ಡಿ’ ಉದ್ಯಾನವನದಲ್ಲಿ ಸುಮಾರು 15 ಲಕ್ಷ ರೂಪಾಯಿಗಳ ಪಾಲಿಕೆಯ ಅನುದಾನದಿಂದ ಈ ಎರೆಹುಳು ಘಟಕವನ್ನು ನಿರ್ಮಿಸಲಾಗಿದೆ.

ರೈತರಿಗೆ ಎರೆಹುಳುಗಳ ಅವಶ್ಯಕತೆ ಎಲ್ಲರಿಗಿಂತಲೂ ಅತೀ ಹೆಚ್ಚು ಇದ್ದು, ಪ್ರತಿ ಕೆ. ಜಿ. ಎರೆಹುಳುಗಳನ್ನು ಕೇವಲ 40 ರೂಪಾಯಿಗಳಿಗೆ ಮಾರಾಟ ಮಾಡುವ ಯೋಜನೆಯನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ರೈತರಿಗೆ ಈ ಎರೆಹುಳು ಘಟಕದಿಂದ ಬಹಳ ಉಪಯೋಗಕಾರಿಯಾಗಲಿದೆ.

ಯಡಿಯೂರು ವಾರ್ಡ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಮತ್ತು 17 ಉದ್ಯಾನವನಗಳಲ್ಲಿ ಇರುವಂತಹ ಸಾವಿರಾರು ಮರಗಳಿಂದ ಪ್ರಾಕೃತಿಕವಾಗಿ ಉದುರುವ ಒಣ ಎಲೆಗಳನ್ನು ಒಟ್ಟಾಗಿ ಶೇಖರಿಸಿ, ಈ ಎರೆಹುಳು ಘಟಕದಲ್ಲಿ ನಿರ್ಮಿಸಿರುವ ತಲಾ 17,000 ಲೀಟರ್ ಸಾಮರ್ಥ್ಯದ 02 ತೊಟ್ಟಿಗಳಲ್ಲಿ ಸಂಗ್ರಹಿಸಿ, ಅದರೊಳಗೆ ತಲಾ 10 ಕೆ. ಜಿ. ಗಳಷ್ಟು ತೂಕದ ಎರೆಹುಳುಗಳನ್ನು 02 ತೊಟ್ಟಿಗಳಲ್ಲಿ ಬಿಡಲಾಗುವುದು. ಇದರೊಂದಿಗೆ ಅಗತ್ಯ ಪ್ರಮಾಣದ ನೀರು ಮತ್ತು ಸಗಣಿಯನ್ನು ಬೆರೆಸಲಾಗುವುದು.

20 ರಿಂದ 25 ದಿನಗಳೊಳಗಾಗಿ ಎರೆಹುಳುಗಳು ಒಣ ಎಲೆಗಳನ್ನು ತಿಂದು ಹಿಟ್ಟಿನ ರೂಪದ ಪುಡಿಯನ್ನು ಉತ್ಪಾದಿಸುತ್ತವೆ. ಈ ರೀತಿ ಎರೆಹುಳುಗಳಿಂದ ಉತ್ಪತ್ತಿಯಾಗುವ ಹಿಟ್ಟಿನ ರೂಪದ ಪದಾರ್ಥ ಅತ್ಯುತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

ಅಲ್ಲದೇ, ಪಾಲಿಕೆಯ 774 ಉದ್ಯಾನವನಗಳು ಹಾಗೂ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಬಹಳಷ್ಟು ಉದ್ಯಾನವನಗಳಿಗೂ ಸಹ ಈ ಘಟಕದಿಂದ ಎರೆಹುಳುಗಳನ್ನು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಈ ಉದ್ದೇಶದಿಂದಲೇ ಯಡಿಯೂರು ವಾರ್ಡ್ ನಲ್ಲಿ ಎರೆಹುಳು ಘಟಕ ವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಿರ್ಮಿಸಿದೆ.

https://youtu.be/lqgaaHYh4Rw

About The Author