ಬೆಳಕವಾಡಿ: ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಗ್ರಾ.ಪಂ.ಸದಸ್ಯರು ಪ್ರತಿಭಟನೆ ನಡೆಸಿದರು.

ಮಳವಳ್ಳಿ ತಾಲೂಕಿನ ಬೆಳಕವಾಡಿ ಬೆಳಿಗ್ಗೆ ಗ್ರಾ.ಪಂ. ಕಛೇರಿಯಿಂದ ಹೊರಟ ಪ್ರತಿಭಟನಕಾರರು ಜ್ವಾಲಾಮುಖಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಗುರುಸ್ವಾಮಿ ಖಾತೆ ಸಂಖ್ಯೆ 1688/2 ರಲ್ಲಿ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ಹಾಗೂ ಮಧ್ಯದಂಗಡಿ ನಿರ್ಮಿಸಿರುವುದು ಸರಿಯಷ್ಟೆ, ಸ್ಥಳೀಯ ಗ್ರಾ.ಪಂ.ವತಿಯಿಂದ ಯಾವುದೇ ಅನುಮತಿ ಪಡೆದಿಲ್ಲ, ಅಲ್ಲದೆ ಈ ಜಾಗ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಯೋಗ್ಯವಾದ ಸ್ಥಳವಲ್ಲ. ಇದರ ಸಮೀಪ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿವೆ, ಶಾಲೆಯ 100 ಮೀ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಈ ಮದ್ಯದಂಗಡಿ ತೆರೆದಿದ್ದು, ಇದರಿಂದ ತೊಂದರೆಯಾಗುತ್ತದೆ ಆದ್ದರಿಂದ ತಕ್ಷಣವೇ ಕಾನೂನು ಬಾಹಿರವಾಗಿ ನಿರ್ಮಿಸಿರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹ ಮಾಡಿದರು.
ಸ್ಥಳಕ್ಕೆ ತಹಸೀಲ್ದಾರ್ ಚಂದ್ರಮೌಳಿ, ಸಿ.ಪಿ.ಐ ಪಿ.ಧನರಾಜ್, ಅಬಕಾರಿ ನಿರೀಕ್ಷಕ ಪ್ರೇಮ್ ಕುಮಾರ್ ಭೇಟಿ ನೀಡಿದರು. ಪ್ರತಿಭಟನಕಾರರು ತಹಸೀಲ್ದಾರ್ ಚಂದ್ರಮೌಳಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಪಿ.ಸೋಮು, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎಂ.ಮಹೇಶ್ವರಿ ಸದಸ್ಯರಾದ ಹರ್ಷದ್ ಪಟೇಲ್,ವೆಂಕಟೇಶ್, ರಾಜಶೇಖರ್, ಸಾವಿತ್ರಮ್ಮ, ಶಾರದಮ್ಮ, ಜಯಮ್ಮ, ಮಾಜಿ ಅಧ್ಯಕ್ಷ ರಮೇಶ್, ಮುಖಂಡರಾದ ಅಶ್ವಥ್ ಕುಮಾರ್, ಕಾಂತರಾಜು, ಪ್ರೊ.ರಂಗಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.





