Political News: ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಜಾಹೀರಾತು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಧ್ಯಕ್ಕೆ ರೀಲೀಫ್ ದೊರೆತಿದೆ. ಶುಕ್ರವಾರ (ಜೂ.7) 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಜುಲೈ 30ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಲೋಕಸಭಾ ಚುನಾವಣೆಯ ಗೆಲುವಿನ ಖುಷಿಯಲ್ಲಿದ್ದ ರಾಹುಲ್ಗೆ ಕೋರ್ಟ್ ಟೆನ್ಶನ್ ಶುರುವಾಗಿತ್ತು. ಇದೇ ಕಾರಣಕ್ಕೆ ಇಂದು ಬೆಳಗ್ಗೆ 9:00 ಗಂಟೆ ಸುಮಾರಿಗೆ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಹುಲ್ ಬಂದಿಳಿದರು. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಬಳಿಕ ನಾಯಕರು ಒಂದೇ ಕಾರಿನಲ್ಲಿ ಖಾಸಗಿ ಹೋಟೆಲ್ಗೆ ತೆರಳಿ ಉಪಹಾರ ಸೇವಿಸಿದರು. ಉಪಹಾರದ ಬಳಿಕ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾದರು.
ಪ್ರಕರಣ ಸಂಬಂದಿಸಿ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತು.
ಮಾಜಿ ಸಂಸದ ಡಿ.ಕೆ ಸುರೇಶ್, ರಾಹುಲ್ ಗಾಂಧಿ ಅವರಿಗೆ 50 ಸಾವಿರ ರೂ. ಮೌಲ್ಯದ ಪ್ರಾಪರ್ಟಿ ಶ್ಯೂರಿಟಿ ನೀಡಿದ್ದು, ಜಾಮೀನು ಮಂಜೂರು ಮಾಡಲಾಗಿದೆ.
ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.1ರಂದು ವಿಚಾರಣೆ ನಡೆಸಿದ್ದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅಂದು ಗೈರಾಗಿದ್ದ ರಾಹುಲ್ ಗಾಂಧಿ ಅವರಿಗೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿತ್ತು. ಇಂದು ಕೋರ್ಟ್ಗೆ ಹಾಜರಾದ ಹಿನ್ನೆಲೆ ಜಾಮೀನು ಮಂಜೂರಾಗಿದೆ. ಇದರಿಂದ ಸಧ್ಯಕ್ಕೆ ರಾಹುಲ್ ಗೆ ಬಿಗ್ ರೀಲೀಫ್ ಸಿಕ್ಕಂತಾಗಿದೆ.

