ಲೋಕಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ಸಂಸದ ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಕಳೆದ ಬಾರಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನು ಬಿಜೆಪಿ ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡಿದ್ದು ಇಂದು ಲೋಕಸಭಾ ಪ್ರಧಾನ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಲೋಕಸಭೆಯ ಬಲಾಬಲದ ಆಧಾರದ ಮೇಲೆ ಎನ್ಡಿಎ ಮೈತ್ರಿಕೂಟ ೨೯೨ ಸ್ಥಾನ ಮತ್ತು ಇಂಡಿಯಾ ಮೈತ್ರಿಕೂಟ ೨೩೨ ಸ್ಥಾನಗಳನ್ನು ಹೊಂದಿದೆ. ಸಂಖ್ಯಾ ಬಲದ ಆಧಾರದ ಮೇಲೆ ಎನ್ಡಿಎ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವಾಗಿದ್ದೂ ಚುನಾವಣೆ ನಡೆಯಲಿದೆ. ಸ್ವಾತಂತ್ರ್ಯ ಬಂದ ಬಳಿಕ ಸ್ಪೀಕರ್ ಹಾಗು ಉಪ ಸ್ಪೀಕರ್ ಹುದ್ದೆಗಳನ್ನು ಆಡಳಿತ ಮತ್ತು ಪ್ರತಿ ಪಕ್ಷಗಳು ಸಮ್ಮತಿಯ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದವು.




