ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸತತ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದರೆ, ಕಾಂಗ್ರೆಸ್ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಈಗಾಗಲೇ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 44 ಹಾಗೂ 2019ರಲ್ಲಿ 52 ಸ್ಥಾನಗಳನ್ನು ಗೆದ್ದಿತ್ತು. ಇದರಿಂದಾಗಿ, ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಕ್ಕಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾರಣಕ್ಕೆ ಲೋಕಸಭೆಯಲ್ಲಿ ಪಕ್ಷದ ನಾಯಕನಾಗಲು ರಾಹುಲ್ ಒಪ್ಪಿರಲಿಲ್ಲ. ಈ ಬಾರಿ ಪಕ್ಷವು 99 ಸ್ಥಾನಗಳಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಹುಲ್ ವಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಬಗ್ಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ. ವಿರೋಧಪಕ್ಷದ ನಾಯಕನ ಸ್ಥಾನದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಸಿ.ಎಂ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ, ರಾಹುಲ್‌ಗಾಂಧಿ ವಿರೋಧಪಕ್ಷದ ಸ್ಥಾನವನ್ನು ಸ್ವೀಕರಿಸಬೇಕು ಎಂದು ನಾನೂ ಕೂಡ ಸಲಹೆ ನೀಡಿದ್ದೆ ಎಂದರು. ಬಿಜೆಪಿ ಮತ್ತು ಮೋದಿಯನ್ನು ಎದುರಿಸಲು ನೀವೇ ವಿರೋಧಪಕ್ಷದ ನಾಯಕರಾಗಬೇಕು ಎಂದು ಕಾರ್ಯಕಾರಿಣಿ ಸಮಿತಿ ಹಾಗೂ ನಾನೂ ಒತ್ತಾಯ ಮಾಡಿದ್ದೇ. ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಂತಸವಾಗಿದೆ. ನಾನು ಗುರುವಾರ ದೆಹಲಿಗೆ ಹೋಗುತ್ತೇನೆ. ಅಲ್ಲಿ ರಾಜ್ಯದ ಸಂಸದರ ಸಭೆಯನ್ನು ಕರೆದು ರಾಜ್ಯದ ಹಿತ ಕಾಪಾಡುವ ಕುರಿತು ಚರ್ಚೆ ನಡೆಸಲಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.