ತುಮಕೂರು: ಕದ್ದ ಮಾಲನ್ನು ಕಳ್ಳರಿಂದ ಖರೀದಿಸಿದ್ದ ಆರೋಪದ ಮೇಲೆ ಖ್ಯಾತ ಚಿನ್ನ ಖರೀದಿ ಸಂಸ್ಥೆ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬಾಬು ಅಲಿಯಾಸ್ ಪಿಎಸ್ ಅಯ್ಯೂಬ್‌ರನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್ ಬಿ.ಎನ್ ಹಾಗೂ ತಂಡದಿಂದ ಬಾಬುರನ್ನು ಬಂಧಿಸಲಾಗಿದೆ.
ಆನೇಕಲ್ ತಾಲೂಕು ಜಿಗಣಿಯಲ್ಲಿ ಕಳ್ಳತನ ನಡೆಸಿದ ಪ್ರಕರಣದ ಆರೋಪಿ ಉದಯ್ ಅಲಿಯಾಸ್ ಅಶೋಕ್, ಕದ್ದ ಒಡವೆಗಳನ್ನು ಅಟ್ಟಿಕಾ ಗೋಲ್ಡ್ ಕಂಪನಿಗೆ ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದ ಎಂದು ತಿಳಿದು ಬಂದಿದೆ. ಉದಯ್ ವಿರುದ್ಧ ತುಮಕೂರು, ಮಂಡ್ಯ, ರಾಮನಗರ ಜಿಲ್ಲೆ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 13 ಕಳ್ಳತನ ಪ್ರಕರಣ ದಾಖಲಾಗಿವೆ.ಎಲ್ಲ ಕಡೆ ಕಳವು ಮಾಡಿದ ಆಭರಣಗಳನ್ನು ಅಟ್ಟಿಕಾ ಗೋಲ್ಡ್ ಕಂಪನಿಗೆ ಮಾರಾಟ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕ ಬಾಬು ಚಿನ್ನ ಖರೀದಿಸಿದ್ದು, ಬೆಂಗಳೂರಿನ ತನ್ನ ನಿವಾಸದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು, ಜೂನ್ 26ರ ಬುಧವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸದ ಬಳಿ ಬಂಧಿಸಲಾಗಿದೆ. ಅಟ್ಟಿಕಾ ಬಾಬು ವಿರುದ್ಧ ಐಪಿಒ ಕಲಂ -454, 380, 411 ಮತ್ತು 413ರ ಅಡಿ ಪ್ರಕರಣ ದಾಖಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಕಚೇರಿ ಮಾಹಿತಿ ನೀಡಿದೆ.
ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಯೂಬ್ ಬಂಧಿತರಾಗಿರುವುದು ಇದೇ ಮೊದಲೇನಲ್ಲ. ಡಕಾಯಿತಿ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಾಬು ಅವರನ್ನು ಕುದೂರು ಮತ್ತು ತಾವರೆಕೆರೆ ಪೊಲೀಸರು 2018ರ ಸೆಪ್ಟೆಂಬರ್ 19ರಲ್ಲಿ ಒಮ್ಮೆ ಬಂಧಿಸಿದ್ದರು. ಮತ್ತೊಮ್ಮ ಎಲ್ಲೂರು ಜಿಲ್ಲೆಯ ಮಹಿಳೆಯೊಬ್ಬರು ಸಲ್ಲಿಸಿದ ಕಿರುಕುಳದ ಆರೋಪದ ಮೇಲೆ 2022ರ ಡಿಸೆಂಬರ್‌ನಲ್ಲಿ ಆಂಧ್ರ ಪ್ರದೇಶ ಪೊಲೀಸರು ಅವರನ್ನು ಬಂಧಿಸಿದ್ದರು. ಅಲ್ಲದೆ, ಇದೇ ಪ್ರಕರಣದಲ್ಲಿ 2022ರ ಸೆಪ್ಟೆಂಬರ್ 18ರಂದು ನ್ಯಾಯಾಲಯದ ಆದೇಶದ ಮೇರೆಗೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬು, ಅವರ ಪತ್ನಿ, ಪುತ್ರಿ ಹಾಗೂ ನಿವೃತ್ತ ಡಿವೈಎಸ್‌ಪಿ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರ ಎಫ್‌ಐಆರ್ ದಾಖಲಾಗಿತ್ತು. ಆರೋಪಿಯನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಟ್ಟಿಕಾ ಬಾಬು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಥವಾ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಟಿಕೆಟ್ ಸಿಗದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.ಇದೀಗ ಕದ್ದ ಚಿನ್ನವನ್ನು ಕರೀದಿಸಿದ್ದ ಆರೋಪದ ಮೇಲೆ ಮತ್ತೊಮ್ಮೆಅಟ್ಟಿಕಾ ಬಾಬು ಪೋಲಿಸರ ಅಥಿತಿಯಾಗಿದ್ದಾರೆ.