Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ದಿನೇ ದಿನೇ ಬೆಳೆಯುತ್ತಿರುವ ನಗರಗಳಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತದೆ. ಇಂತಹ ನಗರ ಇದೀಗ ಪಾರ್ಕಿಂಗ್ ಸಮಸ್ಯೆಯಿಂದ ದಿನನಿತ್ಯ ಜನರನ್ನು ಹೈರಾಣಾಗುವಂತೆ ಮಾಡಿದೆ. ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಪೇಸ್ ಕಡ್ಡಾಯ ಮಾಡಲಾಗಿದೆ. ಹೀಗಿದ್ದರೂ ಪಾರ್ಕಿಂಗ್ ಸ್ಥಳವನ್ನು ಅನ್ಯಕಾರ್ಯಕ್ಕೆ ಬಳಸಲಾಗುತ್ತಿದ್ದು, ಈಗ ರಸ್ತೆ ಮಧ್ಯದಲ್ಲಿಯೇ ವಾಹನ ಪಾರ್ಕ್ ಮಾಡುವಂತಾಗಿದೆ. ಪಾರ್ಕಿಂಗ್ ಹೆಸರಲ್ಲಿ ಬಿಟ್ಟಿರುವ ಜಾಗೆ ಅನ್ಯ ಕೆಲಸಕ್ಕೆ ಬಳಕೆಯಾಗುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ.
ಹೀಗೆ ದೊಡ್ಡ ದೊಡ್ಡ ಬಿಲ್ಡಿಂಗ್ ಗಳ ಮುಂದೆ ನಿಂತಿರುವ ವಾಹನಗಳು, ಎಲ್ಲೂ ಜಾಗವೇ ಇಲ್ಲದೆ ಬಿಲ್ಡಿಂಗ್ ಗಳ ಮುಂದೆ, ರಸ್ತೆಯ ಪಕ್ಕದಲ್ಲೇ ನಿಂತಿರುವ ದ್ವಿಚಕ್ರ ವಾಹನಗಳು, ಹೀಗೆ ಸಿಕ್ಕ ಸಿಕ್ಕಲ್ಲಿ ವಾಹನಗಳು ನಿಲ್ಲಲಿಕ್ಕೆ ಪ್ರಮುಖ ಕಾರಣವೇ ಬೃಹತ್ ಕಟ್ಟಡಗಳು, ಮತ್ತು ಐಷಾರಾಮಿ ಹೋಟೆಲ್ ಗಳು. ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಸರ್ವೇ ಮಾಡುವ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನ ನೀಡಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆ ಕೇವಲ ನೋಟಿಸ್ ಗೆ ಮಾತ್ರ ಸೀಮಿತವಾಗಿದೆ.
ಇನ್ನೂ ಹುಬ್ಬಳ್ಳಿಯಲ್ಲಿ ಹಲವಾರು ವರ್ಷಗಳಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಪಾರ್ಕಿಂಗ್ ಗೆ ಸ್ಥಳವೇ ಇಲ್ಲದೆ ವಾಹನ ಸವಾರರಿಗೆ ವಾಹನಗಳನ್ನು ಪಾರ್ಕ್ ಮಾಡುವುದೇ ದೊಡ್ಡ ಸವಾಲಾಗಿದೆ. ಇನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಕಾರ್ಯ ನಡೆಯುತ್ತಿದ್ದು, ವಾಹನ ಓಡಾಟವೇ ನಗರದಲ್ಲಿ ಕಷ್ಟಸಾಧ್ಯವಾಗಿದೆ. ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನ ಜಾರಿ ಮಾಡಲಾಗಿದ್ದರೂ ಸಹ 300ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಗಾಡಿಗಳನ್ನು ಪಾರ್ಕ್ ಮಾಡುವುದಕ್ಕೆ ಜಾಗವೇ ಇಲ್ಲದಾಗಿದೆ. ಹಿಂದೆ ಕೊಟ್ಟ ಪಾಲಿಕೆಯ ನೋಟಿಸ್ ಗೂ ಸಹ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು, ಪಾಲಿಕೆ ಸರ್ವೇ ಕಾರ್ಯವೇ ಸಂಪೂರ್ಣ ಕಾಲಹರಣ ಎನ್ನುವಂತಾಗಿದೆ.
Bengaluru Airport : ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ?: ತಮಿಳುನಾಡು ಮಹತ್ವದ ನಿರ್ಧಾರ

