ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 17 ವರ್ಷದ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ ದ.ಆಫ್ರಿಕಾ ಗೆಲುವಿಗೆ 17 ರನ್ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯಾ ಎಸೆದ ಮೊದಲ ಚೆಂಡನ್ನು ಮಿಲ್ಲರ್ ಲಾಂಗ್ ಆನ್ ಕಡೆಗೆ ಬಾರಿಸಿದರು. ಸಿಕ್ಸ್ ಹೋಗುತ್ತಿದ್ದ ಚೆಂಡನ್ನು ಸೂರ್ಯಕುಮಾರ್ ಯಾದವ್ ಸೂಪರ್ ಮ್ಯಾನ್ ರೀತಿಯಲ್ಲಿ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿಸಿದ್ರು. ಈ ಕ್ಯಾಚ್ ಟೀಂ ಇಂಡಿಯಾ ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಮರೆಯೋದಕ್ಕೆ ಸಾಧ್ಯವಿಲ್ಲ. ಈ ಕ್ಯಾಚ್ ಟೀಂ ಇಂಡಿಯಾಕ್ಕೆ ವಿಶ್ವಕಪ್ ತಂದುಕೊಟ್ಟಿತು ಅಂದ್ರು ತಪ್ಪಿಲ್ಲ. ಪಂದ್ಯ ಮುಗಿದು 3-4ದಿನಗಳೇ ಕಳೆದಿದಿದ್ದರೂ ಇದೀಗ ಆ ಕ್ಯಾಚ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.
ಸೂರ್ಯನ ಕ್ಯಾಚ್ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದಕ್ಕೂ ಕಾರಣವಾಗಿತ್ತು. ಬೌಂಡರಿ ಲೈನ್ ಗೆ ಬಳಸುವ ಕುಶನ್ ಹಿಂದಕ್ಕೆ ತಳ್ಳಲಾಗಿತ್ತು. ಭಾರತದ ಬೌಲಿಂಗ್ ವೇಳೆ ಬೇಕಂತಲೇ ಕುಶನ್ ಹಿಂದಕ್ಕೆ ದೂಡಲಾಗಿತ್ತು ಎಂದು ಹಲವರು ಆರೋಪಿಸಿದ್ದರು. ಒಂದು ವೇಳೆ ಕುಶನ್ ನಿಗದಿತ ಸ್ಥಳದಲ್ಲಿ ಇದ್ದರೆ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು ಎಂದು ಹಲವರು ವಾದಿಸುತ್ತಿದ್ದಾರೆ. ಅದೇ ರೀತಿ, ಸೂರ್ಯ ಕುಮಾರ್ ಕ್ಯಾಚ್ ಪಡೆಯುವ ವೇಳೆ ಬೌಂಡರಿ ಲೈನ್ ಟಚ್ ಮಾಡಿದ್ದರು. ಹೀಗಾಗಿ ಅದು ನಾಟೌಟ್ ಆಗಿತ್ತು ಅದನ್ನು ಸಿಕ್ಸ್ ಘೋಷಿಸಬೇಕಿತ್ತು ಎಂಬ ವಾದವೂ ಕೂಡ ಹಲವರದಾಗಿತ್ತು.
ಇದೀಗ ಈ ವಿವಾದದ ನಡುವೆಯೇ ದಕ್ಷಿಣ ಆಫ್ರಿಕಾದ ದಂತಕಥೆ ಶಾನ್ ಪೊಲಾಕ್ ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ. ಕ್ಯಾಚ್ ವಿವಾದದ ಬಗ್ಗೆ, ಪೊಲಾಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಸೂರ್ಯನ ಈ ಕ್ಯಾಚ್ ಅನ್ನು ಶ್ಲಾಘಿಸಿದ್ದಾರೆ. “ಸೂರ್ಯನ ಕ್ಯಾಚ್ ಅದ್ಭುತವಾಗಿತ್ತು. ಆತನ ಕಾಲು ಬೌಂಡರಿಲೈನ್ ಕುಶನ್ಗೆ ಮುಟ್ಟಲಿಲ್ಲ. ಇದು ಕೌಶಲ್ಯಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ಈ ಕ್ಯಾಚ್ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಆದರೆ ದ.ಆಫ್ರಿಕಾದವರೇ ಆದ ಶಾನ್ ಪೊಲಾಕ್ ತಮ್ಮ ತಂಡದ ಪರವಾಗಿ ಮಾತನಾಡದೇ ತಮ್ಮ ನಿಯತ್ತಿನ ಹೇಳಿಕೆಯಿಂದ ಎಲ್ಲರ ಮೆಚ್ಚುಗೆಗೂ ಪಾತ್ರರಾಗ್ತಿದ್ದಾರೆ.




