2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ಹೇಳುವುದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ, ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಸೋಲಿಸಲಿದೆ ಎಂದು ರಾಹುಲ್ ಗಾಂಧಿ ಬಿಜೆಪಿಗೆ ಸವಾಲೆಸೆದಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ತಮ್ಮ ಮೊದಲ ಭಾಷಣ ಮಾಡಿದ ರಾಹುಲ್, ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪದೇ ಪದೇ ಗುಜರಾತ್‌ಗೆ ಹೋಗಿ ಏನು ಮಾಡ್ತೀರಾ ಎಂಬ ಬಿಜೆಪಿಯ ವ್ಯಂಗ್ಯಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಬರೆದಿಟ್ಟುಕೊಳ್ಳಿ ಮುಂದಿನ ಗುಜರಾತ್ ಚುನಾವಣೆಯಲ್ಲಿ ಇಂಡಿಯಾ ಕೂಟ ಕಾಂಗ್ರೆಸ್‌ನ್ನು ಸೋಲಿಸಲಿದೆ ಎಂದರು. ಅಲ್ಲದೇ ಇಂಡಿಯಾ ಕೂಟ ಎಂಬ ಐಡಿಯಾದ ಮೇಲೆ ವ್ಯವಸ್ಥಿತ ಹಾಗೂ ದೊಡ್ಡ ಮಟ್ಟದಲ್ಲಿ ದಾಳಿ ನಡೆಯುತ್ತಿದೆ ಎಂದು ರಾಹುಲ್ ಇದೇ ವೇಳೆ ಆರೋಪಿಸಿದರು.
ಇನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿ ನಮಿಸಿದ್ದಕ್ಕೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಾರೆ. ಇದು ಸ್ಪೀಕರ್ ಪೀಠಕ್ಕೆ ಭೂಷಣವಲ್ಲ ಎಂದಿದ್ದಾರೆ. ನೀವು ನನ್ನನ್ನು ಭೇಟಿಯಾಗಿ ಕೈಕುಲುಕಿದಾಗ ನಾನು ಗಮನಿಸಿದ್ದೇನೆ, ನೀವು ನೇರವಾಗಿ ನಿಂತಿದ್ದಿರಿ. ಆದರೆ ನೀವು ಪ್ರಧಾನಿಯನ್ನು ಭೇಟಿಯಾದಾಗ ತಲೆಬಾಗಿ ನಮಸ್ಕರಿಸಿದ್ದೀರಿ. ಇದು ಸ್ಪೀಕರ್ ಪೀಠದ ಗೌರವಕ್ಕೆ ತಕ್ಕುದಲ್ಲ ಎಂದರು. ಇದಕ್ಕೆ ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ಆಕ್ಷೇಪಕ್ಕೆ ಉತ್ತರಿಸಿದ ಸ್ಪೀಕರ್ ಓಂ ಬಿರ್ಲಾ, ನನ್ನ ಸಂಸ್ಕಾರವೂ ನನಗೆ ಹಿರಿಯರಿಗೆ ತಲೆಬಾಗಿ ನಮಸ್ಕರಿಸಿ ಗೌರವಿಸುವಂತೆ ಹೇಳುತ್ತದೆ. ಹಾಗೆಯೇ ನನಗಿಂತ ಕಿರಿಯರನ್ನು ಸಮಾನವಾಗಿ ಕಾಣುವಂತೆ ಹೇಳುತ್ತದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ನಾನು ನಿಮ್ಮ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಸದನದ ಸ್ಪೀಕರ್‌ಗಿಂತ ಯಾರು ದೊಡ್ಡವರಲ್ಲ ಎಂದು ನಾನು ನಂಬಿದ್ದೇನೆ. ನೀವು ಸದನದ ನಾಯಕ ಹಾಗೂ ಯಾರೊಬ್ಬರ ಮುಂದೆಯೂ ತಲೆಬಾಗಬೇಕಾದ ಅಗತ್ಯವಿಲ್ಲ ಎಂದರು.