Dharwad news: ಧಾರವಾಡ : ವಾಹನ ಸವಾರರಿಗೆ ಸುರಕ್ಷಿತ ಸಂಚಾರದ ಭರವಸೆ ಮೂಡಿಸುವುದು ಸಂಬಂಧಿಸಿದ ಇಲಾಖೆಗಳ ಕರ್ತವ್ಯ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ ಬರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳನ್ನು ತೆಗೆದು ಹಾಕಬೇಕು. ಈ ಕುರಿತು ಜಿಲ್ಲೆಯಲ್ಲಿ ರಸ್ತೆ ಸಮೀಕ್ಷೆ ಮಾಡುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ರಸ್ತೆ ಸಾರಿಗೆ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟವಾಗಿದೆ. ಅನುಮತಿ ಇಲ್ಲದೇ ಅನೇಕರು ರಸ್ತೆಗಳ ಮೇಲೆ ಹಂಪ್ಸ್ ಮಾಡುತ್ತಾರೆ. ಯಾವುದೇ ಮುನ್ಸೂಚನೆ ಇಲ್ಲದೇ ಹಂಪ್ಸ್ ಹಾಕುವುದರಿಂದ ಅಪಘಾತಗಳು ಹೆಚ್ಚಾಗಿ, ಸವಾರರ ಮರಣಗಳು ಹೆಚ್ಚುತ್ತವೆ. ಈ ಕುರಿತು ರಸ್ತೆ ಸಮೀಕ್ಷೆ ಮಾಡಿ, ಅನುಮತಿಯಿಲ್ಲದ ಹಂಪ್ಸ್ಗಳನ್ನು ತೆಗೆದು ಹಾಕಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.