Hubli News: ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಹೊಸ ಕಾಯಕಲ್ಪ ಸಿಗುವ ಕಾಲ ಸನ್ನಿಹಿತವಾಗಿದೆ. ಇಷ್ಟು ದಿನ ಹುಬ್ಬಳ್ಳಿ ನಗರದಲ್ಲಿ ಮೀತಿ ಮೀರಿದ್ದ ರೌಡಿಗ್ಯಾಂಗ್‌ಗಳ ಉಪಟಳ, ಗಾಂಜಾ, ಡ್ರಗ್ ಮಾರಾಟ, ಕಂಡ-ಕಂಡಲ್ಲಿ ನಡೆಯುತ್ತಿದ್ದ ಚಾಕು ಇರಿತ, ಕೊಲೆ, ಸುಲಿಗೆ, ಲ್ಯಾಂಡ್ ಗ್ರಾಬಿಂಗ್‌ನಂತಹ ಪ್ರಕರಣಗಳು ಅವಳಿನಗರದ ಜನರ ನೆಮ್ಮದಿಗೆ ಭಂಗ ಉಂಟು ಮಾಡಿತ್ತು. ಈ ವ್ಯವಸ್ಥೆ ಯಾರಿಂದಲೂ ಸುಧಾರಿಸಲು ಸಾಧ್ಯವೇ ಇಲ್ಲ ಎಂಬ ಭಾವನೆ ಜನಮಾನಸದಲ್ಲಿ ದಟ್ಟವಾಗಿತ್ತು. ಆದರೆ ಇದಕ್ಕೆಲ್ಲ ಮುಕ್ತಿ ಹಾಡುವ ದಿನಗಳು ಇಷ್ಟು ಬೇಗ ಬರುತ್ತೆ ಅಂತ ಯಾರೂ ಯೋಚಿಸಿರಲಿಲ್ಲ.
ನೂತನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವಳಿ ನಗರದ ಕಮಿಷನರ್ ಹುದ್ದೆಯನ್ನು ವಹಿಸಿಕೊಂಡ 15 ದಿನ ಕಳೆಯುತ್ತಿದೆ. ಅಷ್ಟೇ ಆಗಲೇ ಸಾರ್ವಜನಿಕರಲ್ಲಿ ಒಂದಷ್ಟು ಭರವಸೆ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೇ ಕಳೆದ 10 ವರ್ಷದಲ್ಲಿ ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ನಡೆದ ಕ್ರಿಮಿನಲ್ ಕೇಸ್‌ಗಳ ವಿವರವನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಕೊಲೆ, ಸುಲಿಗೆ ದರೋಡೆ, ಗಾಂಜಾ, ಡ್ರಗ್ಸ್ ಮಾರಾಟ, ಕ್ರಿಕೆಟ್
ಬೆಟ್ಟಿಂಗ್, ಮಟ್ಕಾ, ಇಸ್ಪೀಟು ಅಡ್ಡೆ, ರೌಡಿಗಳ ಗ್ಯಾಂಗ್‌ಗಳು ನಡೆಸುವ ಗೂಂಡಾಗಿರಿ, ಹೀಗೆ ಪ್ರತಿಯೊಂದು ಪ್ರಕರಣ ಹಿಸ್ಟರಿ ಕಲೆ ಹಾಕುತ್ತಿದ್ದಾರೆ. ಎನ್. ಶಶಿಕುಮಾರ್ ಸುತ್ತದ ಜಾಗವಿಲ್ಲ, 10 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಏನೆಲ್ಲ ಪ್ರಗತಿಯಾಗಿದೆ? ನ್ಯಾಯಾಲಯದಲ್ಲಿ ಕೇಸ್‌ಗಳು ಯಾವ ಹಂತದಲ್ಲಿದೆ? ಕೊಲೆ ಆರೋಪಿಗಳು ಜಾಮೀನು ಪಡೆದು ಹೊರಬಂದು ಈಗ ಏನ್ ಮಾಡುತ್ತಿದ್ದಾರೆ? ಹೀಗೆ ಪ್ರತಿಯೊಂದು ವಿವರ ಕಲೆ ಹಾಕಿ ಖುದ್ದಾಗಿ ತಾವೇ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಖಡಕ್ ಪೊಲೀಸ್ ಅಧಿಕಾರಿ ಅಂತಲೇ ಕರೆಸಿಕೊಳ್ಳುವ ಎನ್.ಶಶಿಕುಮಾರ್, ಹುಬ್ಬಳ್ಳಿ – ಧಾರವಾಡ ಅವಳಿ ನಗರದ ರೌಡಿಸಮ್‌ಗೆ ಮಟ್ಟ ಹಾಕಲು ಪಕ್ಕಾ ಪ್ಲಾನ್ ಸಿದ್ದಪಡಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರು, ಮಂಗಳೂರಿನಲ್ಲಿ ಕೆಲಸ ಮಾಡಿ ಬಂದಿರುವ ಕಮಿಷನರ್ ಅಲ್ಲಿನ ರೌಡಿಸಮ್ ನಿಯಂತ್ರಣಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅದೇ ಮಾದರಿ ಹುಬ್ಬಳ್ಳಿ ಧಾರವಾಡ ನಗರದ ರೌಡಿಗಳ ವಿಚಾರದಲ್ಲಿ ಅನುಸರಿಸಲಿದ್ದಾರೆ ಎನ್ನಲಾಗಿದೆ.
ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ರೌಡಿಯ ಜಾತಕ ಸಿದ್ದವಾಗುತ್ತಿದೆ. ಅದರಲ್ಲೂ ABC ಕೆಟಗರಿ ಮಾದರಿಯಲ್ಲಿ ರೌಡಿ ಪಟ್ಟಿ ಸಿದ್ಧವಾಗಿದೆ. ರೌಡಿಗಳಿಗೆ ಕುಕೃತ್ಯದಲ್ಲಿ ಭಾಗಿಯಾಗಲು ಆರ್ಥಿಕ ನೆರವು ನೀಡುವವರ ವಿವರ, ವಾಹನ ಒದಗಿಸುವುದು, ಅವರಿಗೆ ಗಿರಾಕಿಗಳನ್ನು ತಂದು ಕೊಡುವುದು ಸೇರಿದಂತೆ ಪ್ರತಿಯೊಬ್ಬರ ಹಿನ್ನೆಲೆ ಕಲೆ ಹಾಕಲಾಗುತ್ತಿದೆ.
ರೌಡಿಗಳ ಕರೆಗಳ ವಿವರ, ಅವರ ವಾಟ್ಸಪ್ ವಿವರ, ಅವರ ನಿತ್ಯದ ಚಲನವಲನ, ರೌಡಿಗಳ ಅರ್ಥಿಕ ಮೂಲ, ಅಪರಾಧಿ ಕೃತ್ಯದಲ್ಲಿ ಜಾಮೀನಿನ ಮೇಲೆ ಹೊರಬರಲು ಅರ್ಥಿಕ ನೆರವು ನೀಡಿದ್ದು ಯಾರು? ಯಾಕೆ ಬಿಡಿಸಿ ಕೊಂಡು ಬಂದ್ರು. ಗಾಂಜಾ ಡ್ರಗ್ಸ್ ಮಾರಾಟಕ್ಕೆ ಕುಮ್ಮಕ್ಕು, ಇಸ್ಪೀಟ್ ಅಡ್ಡೆಗಳಲ್ಲಿ ನಡೆಯುವ ಬಡ್ಡಿ ವ್ಯವಹಾರ. ಹುಬ್ಬಳ್ಳಿ ಸುತ್ತಮುತ್ತಲಿನ ಲ್ಯಾಂಡ್ ಗ್ರಾಬಿಂಗ್ ತೊಡಗಿಸಿಕೊಂಡು ರೌಡಿಗಳ ವಿವರ ಸಿದ್ಧವಾಗುತ್ತಿದೆ.
ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ-73 ರೌಡಿಶೀಟರ್, ಹುಬ್ಬಳ್ಳಿ ಶಹರ ಠಾಣೆ- 193, ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ-176, ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು-164, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ-132 ಜನ ರೌಡಿಶೀಟರ್‌ಗಳಿದ್ದು, ಕಸಬಾ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ-200ಜನ, ಘಂಟಿಕೇರಿ-39, ವಿದ್ಯಾನಗರ ಠಾಣೆ-40, ಗೋಕುಲ ರೋಡ್ ಠಾಣೆಯಲ್ಲಿ-18 ಜನ ರೌಡಿ ಶೀಟರ್‌ಗಳಿದ್ದು ಇವರೆಲ್ಲ ಜಾತಕ ಸಿದ್ಧವಾಗುತ್ತಿದೆ.
ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು




