Ramanagara News: ರಾಮನಗರ: ರಾಮನಗರ ಜಿಲ್ಲೆಯ ಮಳಗಾಳು ಗ್ರಾಮದಲ್ಲಿ ದಲಿತ ಯುವಕನ ಕೈ ತುಂಡು ಮಾಡಲಾಗಿದ್ದು, ಬಿಎಸ್ಪಿ ರಾಜ್ಯ ಘಟಕ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಈ ಕೆಲಸ ಮಾಡಿದ ರೌಡಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿಕರು ಎಂದಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈರಮುಡಿ ಅವರ ಪುತ್ರ ಅನೀಶ್ ಎಂಬುವವನ ಕೈಯನ್ನು ರೌಡಿ ಹರ್ಷ ಅಲಿಯಾಸ್ ಕೈಮ ಎಂಬುವವನು ಕಡಿದು ಹಾಕಿದ್ದಾನೆ. ಈತ ಡಿಕೆಶಿ ಸಂಬಂಧಿಕನಾಗಿದ್ದಾನೆಂದು ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಮುಖಂಡನ ಪುತ್ರನಿಗೇ ಹೀಗಾದರೆ, ಇನ್ನು ಸಾಮಾನ್ಯರ ಗತಿ ಏನೆಂದು ಪ್ರಶ್ನಿಸಿದ್ದಾರೆ. ಡಿಕೆಶಿಯ ಕ್ಷೇತ್ರ ಕನಕಪುರ ರಾಮನಗರ ಜಿಲ್ಲೆಯ ಬಿಹಾರವಾಗಿದೆ. ಇಲ್ಲಿ ರೌಡಿಸಂ ಸಾಮಾನ್ಯವಾಗಿದ್ದು, ದಲಿತರಿಗೆ ಬಡವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದಾರೆ.
ಈ ಹಿಂದೆ ಕ್ಷೇತ್ರದಲ್ಲಿ ಕೊಲೆ, ಸುಲಿಗೆ, ಈ ರೀತಿ ಕೈ ಕಾಲು ಕತ್ತಿರಿಸಿದ ಕೇಸ್ ಆಗಿದ್ದು, ಈ ಎಲ್ಲ ಪ್ರಕರಣದಲ್ಲೂ ಹರ್ಷ ಭಾಗಿಯಾಗಿದ್ದಾನೆ. ಆದರೆ ಪೊಲೀಸರು ಮಾತ್ರ ಈ ಬಗ್ಗೆ ಯಾವ ಕ್ರಮವೂ ಕೈಗೊಂಡಿಲ್ಲ. ಪೊಲೀಸರು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.