ಹುಬ್ಬಳ್ಳಿಯಲ್ಲಿ ಕಳ್ಳನ ಕಾಲಿಗೆ ಗುಂಡೇಟು: ಆರೋಪಿಗೆ ವಾರ್ನಿಂಗ್ ಕೊಟ್ಟ ಕಮಿಷನರ್ ಶಶಿಕುಮಾರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಕೇಶ್ವಾಪುರದಲ್ಲಿನ ಭುವನೇಶ್ವರಿ ಬಂಗಾರದ ಅಂಗಡಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕರೆತಂದು ತಾರಿಹಾಳ ಬಳಿ ವಿಚಾರಣೆ ಮಾಡುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಪಿಎಸ್‌ಐ ಕವಿತಾ ಆರೋಪಿ ಫರಾನ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಮೂವರು ಪೊಲೀಸರಿಗೆ ಕೂಡಾ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಹಾಗೂ ಡಿಸಿಪಿಗಳಾದ ರವೀಶ್ ಹಾಗೂ ನಂದಗಾವಿ ಭೇಟಿ ನೀಡಿ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

ಕಳೆದ 10 ದಿನಗಳ ಹಿಂದೆ ರಮೇಶ ಭವನದ ಬಳಿ ಇರುವ ಭುವನೇಶ್ವರಿ ಜ್ಯುವೆಲರಿ ಶಾಪ್‌ನಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿಯನ್ನು ಕದ್ದು ಮುಂಬೈ ಕಡೆ ಗ್ಯಾಂಗ್ ಪರಾರಿಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಶಶಿಕುಮಾರ್ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಆಗ ಈ ನಟೋರಿಯಸ್ ಗ್ಯಾಂಗ್ ಮುಂಬೈ ಮೂಲದ ಗ್ಯಾಂಗ್‌ ಅನ್ನೋ ಮಾಹಿತಿ ಸಿಕ್ಕಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮುಂಬೈನಲ್ಲಿ ಫರಾನ್ ಎಂಬ ನಟೋರಿಯಸ್ ಕಳ್ಳನನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದರು.

ಹುಬ್ಬಳ್ಳಿಗೆ ಬಂದಾಗ ತಾರಿಹಾಳದಲ್ಲಿನ ಓರ್ವ ವ್ಯಕ್ತಿಯಿಂದ ನಗರದಲ್ಲಿನ ಜ್ಯುವೆಲರಿ ಶಾಪ್ ಹಾಗೂ ಕೆಲವು ಬ್ಯಾಂಕ್‌ಗಳ ಮಾಹಿತಿಯನ್ನು ಪಡೆದಿದ್ದಾಗಿ ಆರೋಪಿ ಫರಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದು ಬೆಳಗ್ಗೆ 6:30ಕ್ಕೆ ಫರಾನ್‌ನನ್ನು ತಾರಿಹಾಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪಿಎಸ್‌ಐ ಕವಿತಾ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಈ ನಟೋರಿಯಸ್ ಕಳ್ಳ ಫರಾನ್ ಮೇಲೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕೂಡಾ ಇದೆ ರೀತಿ ಕಳ್ಳತನ ಮಾಡುತ್ತಿದ್ದು, ಈತನ ಮೇಲೆ 15ಕ್ಕೂ ಹೆಚ್ಚು ಪ್ರಕರಣಗಳು ಇದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಈ ಗ್ಯಾಂಗ್ ನಲ್ಲಿ ಇನ್ನು ಹಲವು ನಟೋರಿಯಸ್ ಕಳ್ಳರು ಶಾಮೀಲಾಗಿದ್ದು ಅವರ ಪತ್ತೆ ಮಾಡಲು ಕೂಡಾ ಇದೀಗ ಮುಂಬೈ ನಲ್ಲಿ ಪೊಲೀಸರ ಟೀಮ್ ಕಾರ್ಯಾಚರಣೆ ನಡೆಸಿದೆ. ಕಳ್ಳತನ ಮಾಡಿದ್ದ ಈ ನಟೋರಿಯಸ್ ಕಳ್ಳರನ್ನು ಪತ್ತೆ ಮಾಡಿದ ಕಾರ್ಯಕ್ಕೆ ಇದೀಗ ಹುಬ್ಬಳ್ಳಿಯ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದು ಒಂದೆಡೆಯಾದ್ರೆ, ಹುಬ್ಬಳ್ಳಿಯಲ್ಲಿ ಇನ್ನು ಮೇಲೆ ಕಳ್ಳತನ ಮಾಡಲು ಬರುವ ಕಳ್ಳರು ಭಯ ಪಡುವಂತಾಗಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author