Dharwad News: ಧಾರವಾಡ: ಧಾರವಾಡ ತಾಲೂಕಿನ ವೆಂಕಟಾಪುರದಲ್ಲಿ ಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಯಲ್ಲಪ್ಪ ಹಿಪ್ಪಿಯವರ ನಿವಾಸಕ್ಕೆ ಇಂದು ಸಚಿವ ಸಂತೋಷ್ ಲಾಡ್ ಭೇಟಿ ನೀಡಿದರು.
ಮೂರು ದಿನಗಳ ಹಿಂದೆ ಪಕ್ಕದ ಮನೆಯ ಗೋಡೆ ಕುಸಿದು, ಟೆಂಟ್ ಮೇಲೆ ಬಿದ್ದಿದ್ದು, ಯಲ್ಲಪ್ಪ ಎಂಬುವವರು ಮೃತಪಟ್ಟಿದ್ದು, ಇಬ್ಬರು ಮಹಿಳೆಯರಿಗೆ ಗಾಯವಾಗಿತ್ತು. ಈ ಹಿನ್ನೆಲೆ ಅವರ ಕುಟುಂಬ ಸದಸ್ಯರನ್ನು ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ, ವೈಯಕ್ತಿಕವಾಗಿ 20 ಸಾವಿರ ನಗದು ಸಹಾಯ ಮಾಡಿದ್ದಾರೆ.
ಬಳಿಕ ಮಾಧ್ಯಮದವರ ಬಳಿ ಮಾತನಾಡಿದ ಲಾಡ್, ಈಗಾಗಲೇ ಕುಟುಂಬಕ್ಕೆ ಸರ್ಕಾರದಿಂದಲೂ ಪರಿಹಾರ ಬಂದಿದೆ. ಐದು ಲಕ್ಷ ಪರಿಹಾರ ಕೊಡಲಾಗಿದೆ. ಈ ಭಾಗದಲ್ಲಿ ತುಂಬಾ ಹಳೆಯ ಮನೆಗಳಿವೆ. ಹೀಗಾಗಿ ಗಂಜಿ ಕೇಂದ್ರ ಮಾಡುತ್ತೇವೆ. ನವಗ್ರಾಮ ಯೋಜನೆಯ ಮನೆಗಳು ಇಲ್ಲಿವೆ. ಅವೆಲ್ಲ 30 ವರ್ಷ ಹಳೆ ಮನೆ ಇವೆ. ಹೀಗಾಗಿ ಅವೆಲ್ಲ ಸೋರುತ್ತಿವೆ. ಇದರಿಂದಾಗಿ ಈ ಘಟನೆ ನಡೆದಿದೆ. ಮಳೆಯಿಂದ ಮನೆ ಹಾನಿ ಕೆಟಗೆರಿ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯದಿಂದ ಕೊಡಬೇಕಿರೋ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಮನೆ ಹಾನಿ ಪರಿಹಾರ ಮೊತ್ತ ಕಡಿಮೆ ಮಾಡಿರೋ ವಿಚಾರದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಆ ಸಮಯದಲ್ಲಿ ಕೆಲವೊಂದು ದುರುಪಯೋಗ ಆಗಿದೆ. ಅದರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯೂ ಆಗಿದೆ. ಹೀಗಾಗಿ ಯಾವ ಕೆಟಗೇರಿ ಮಾಡಬೇಕು. ಎಷ್ಟೆಷ್ಟು ಪರಿಹಾರ ಕೊಡಬೇಕೆಂದು ಸಂಬಂಧಿಸಿದ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಗ್ರಾಪಂ ಮಟ್ಟದಲ್ಲಿ ಶಿಥಿಲಗೊಂಡ ಮನೆಗಳ ಸರ್ವೆ ಮಾಡಿಸುತ್ತೇವೆ. ವೆಂಕಟಾಪುರ ಘಟನೆ ಮರುಕಳಿಸದಂತೆ ಮುನ್ನಚ್ಚರಿಕೆ ವಹಿಸಲಾಗುವುದು ಎಂದು ಸಂತೋಷ್ ಲಾಾಡ್ ಹೇಳಿದ್ದಾರೆ.