ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ19ಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. 19ನೇ ಗೇಟ್ ಸಂಪೂರ್ಣ ಬಂದ್ ಆಗಿದ್ದು, ಸೋರಿಕೆಯಾಗುತ್ತಿದ್ದ ನೀರಿಗೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ನಾಲ್ಕು ಜಿಲ್ಲೆಗಳ ರೈತರ ಆತಂಕ ಸದ್ಯ ದೂರವಾಗಿದೆ.
ಆಗಸ್ಟ್ 17ರ ಸಂಜೆ ಸ್ಟಾಪ್ ಲಾಗ್ ಗೇಟ್‌ನ ಐದು ಎಲಿಮೆಂಟ್‌ಗಳನ್ನು ಜೋಡಿಸಲಾಗಿತ್ತು. ಎಲಿಮೆಂಟ್‌ಗಳ ಸಂದುಗಳಿಂದ ಸುಮಾರು 509 ಕ್ಯೂಸೆಕ್ ನಷ್ಟು ನೀರು ಹೊರ ಹರಿಯುತ್ತಿತ್ತು. ಸಿಬ್ಬಂದಿಗಳು ದುರಸ್ತಿ ಕಾರ್ಯ ಮುಂದುವರೆಸಿ ಗೇಟ್‌ನ ಸಂದುಗಳನ್ನು ಮುಚ್ಚಿ ಸೋರಿಕೆ ತಡೆದಿದ್ದಾರೆ. ಇದರೊಂದಿಗೆ ಡ್ಯಾಂನಿಂದ 10,700 ಕ್ಯೂಸೆಕ್ ನೀರು ಮಾತ್ರ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಏರಿಕೆಯಾಗುತ್ತಿದೆ.
ಕುತೂಹಲದ ಸಂಗತಿ ಎಂದರೆ, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಿದ ಪ್ರಮುಖ 20 ಕಾರ್ಮಿಕರಿಗೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಘೋಷಿಸಿದ್ದಂತೆ ತಲಾ 50 ಸಾವಿರ ರೂ. ಬಹುಮಾನ ನೀಡಿದ್ದಾರೆ. ಇಲ್ಲಿನ ಸಚಿವ ಜಮೀರ್ ಪರವಾಗಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾರ್ಮಿಕರಿಗೆ ಬಹುಮಾನ ವಿತರಿಸಿದ್ದಾರೆ.
ಅಣೆಕಟ್ಟು ಸ್ಟಾಪ್ ಗೇಟ್ ಅಳವಡಿಕೆಗೆ ಶ್ರಮಿಸಿದ ಕಾರ್ಮಿಕರನ್ನು ಗೌರವಿಸುವ ದೊಡ್ಡ ಗುಣ ಜಮೀರ್ ಅವರದ್ದು. ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಗೊಳಿಸಿ, ನಿಮಗೆಲ್ಲವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವರು ಮಾತು ಕೊಟ್ಟಿದ್ದರು. ಅದರಂತೆ ಜಮೀರ್ ತಮ್ಮ ಅನುಪಸ್ಥಿತಿಯಲ್ಲಿ ಶಾಸಕ ಗಣೇಶ್ ಅವರಿಗೆ ಜವಾಬ್ದಾರಿ ವಹಿಸಿ ವೈಯಕ್ತಿಕವಾಗಿ ಹಣ ಕಳುಹಿಸಿಕೊಟ್ಟು, ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರು ಈ ರೀತಿಯ ಉಡುಗೊರೆಗಳನ್ನು ಕೊಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.