Dharwad News: ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರು ಚಕ್ಕಡಿ ರಸ್ತೆಯ ಹೆಸರಿನಲ್ಲಿ ಗ್ರಾಮೀಣ ಭಾಗದ ಜಮೀನು ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿರುವುದಾಗಿ ಹೇಳಿದ್ದಾರೆ. ಆದರೆ ಎಷ್ಟು ಅನುದಾನ ತಂದಿದ್ದಾರೆ ಎಂದು ಹೇಳಿಲ್ಲ. ಹಾಗಾಗಿ ಶಾಸಕರು ಈ ಚಕ್ಕಡಿ ರಸ್ತೆಗೆ ಬಿಡುಗಡೆಯಾದ ಅನುದಾನ ಸಾರ್ವಜನಿಕವಾಗಿ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರವರು ಆಗ್ರಹಿಸಿದ್ದಾರೆ.
ಈ ಕುರಿತು ನವಲಗುಂದದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ರಸ್ತೆಗಳಿಗೆ ಅಭಿವೃದ್ಧಿಗೆ ಎಷ್ಟು ಅನುದಾನ ಶಾಸಕರು ತಂದಿದ್ದಾರೆ ನಮ್ಮಗೆ ಗೊತ್ತಿದೆ. ಆದರೆ ಬಂದ ಅನುದಾನದ ಬಗ್ಗೆ ಶಾಸಕರೇ ಹೇಳಬೇಕು. ಇದರ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಸಿಗಬೇಕು. ಹಾಗಾಗಿ ಅನುದಾನದ ಬಗ್ಗೆ ಶಾಸಕರು ಮಾಹಿತಿ ನೀಡಲಿ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಚಕ್ಕಡಿ ರಸ್ತೆಯ ಹೆಸರಿನಲ್ಲಿ ಪಾರಂಪರಿಕ ಗುಡ್ಡದ ಮಣ್ಣನ್ನು ಲೂಟಿ ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಈಗಾಗಲೇ ಮಾತಾಡಿದ್ದೇನೆ. ಇಲ್ಲಿ ಅಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅನುದಾನ ಬಗ್ಗೆ ಜನತೆಗೆ ಗೊತ್ತಾಗಬೇಕಿದೆ, ಎಷ್ಟು ಬಂತು ಎಷ್ಟು ಖರ್ಚಾಗಿದೆ. ಎಷ್ಟು ಉಳಿದಿದೆ. ತಿಳಿಯುವ ಅವಶ್ಯವಿದೆ ಎಂದರು.