Darshan Case: ಕಾರಾಗೃಹದಲ್ಲಿದ್ರೂ ‘ಕಾಟೇರ’ನಿಗೆ ಕಂಟಕ.. 3 ಎಫ್​ಐಆರ್​ನಲ್ಲೂ ದರ್ಶನ್​ಗೆ ಖಾಕಿ ಶಾಕ್!

ಬೆಂಗಳೂರು: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್​ (Actor Darshan)ಗೆ ಇದೀಗ ಮತ್ತೊಂದು ಕಂಟಕ ಶುರುವಾಗಿದೆ. ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ಈವರೆಗೂ ಒಟ್ಟು ಮೂರು ಪ್ರತ್ಯೇಕ ಎಫ್​ಐಆರ್​ಗಳು ದಾಖಲಾಗಿವೆ.

 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಕೊಟ್ಟ ದೂರಿನನ್ವಯ ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳು ಸೀನ ಹಾಗೂ ಮ್ಯಾನೇಜರ್ ನಾಗರಾಜ್ ಮೇಲೆ ಕೇಸ್ ದಾಖಲಾಗಿದೆ. ಜೈಲಿನಲ್ಲಿ ಸಿಗರೇಟ್ ಕೊಟ್ಟಿದ್ದಕ್ಕೆ, ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಕ್ಕೆ ಹಾಗೂ ಸಿಸಿಬಿ ಪೊಲೀಸರ ದಾಳಿ ವೇಳೆ ಕೆಲ ವಸ್ತುಗಳನ್ನು ಮರೆಮಾಚಿದ್ದಕ್ಕೆ ಸಂಬಂಧಿಸಿ ಮೂರು ಪ್ರತ್ಯೇಕ ಕೇಸ್‌ಗಳು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಮೂರು ಪ್ರಕರಣಗಳಲ್ಲೂ ನಟ ದರ್ಶನ್‌ ಅವರನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವರ ಭೇಟಿ:
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಪರಪ್ಪನ ಅಗ್ರಹಾರ ಕೆಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸ್​ ಮಹಾನಿರ್ದೇಶಕ ಅಲೋಕ್ ಮೋಹನ್, ಬಂಧಿಖಾನೆ ‌ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಐಜಿಪಿ ಆನಂದ್ ರೆಡ್ಡಿ, ಡಿಐಜಿ ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಜೈಲು ಪರಿಶೀಲನೆ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಜೈಲು ಸೂಪರಿಂಟೆಂಡೆಂಟ್‌ಗಳಾದ ಮಲ್ಲಿಕಾರ್ಜುನ ಸ್ವಾಮಿ, ಕೇಶವ್ ಮೂರ್ತಿ ಅವರಿಂದ ಲೋಪವಾಗಿದೆ. ಹೀಗಾಗಿ ಏಳು ಜನರನ್ನು ಅಮಾನತು ಮಾಡಲಾಗಿದೆ. ಕಿರಿಯ ಅಧಿಕಾರಿ, ಸಿಬ್ಬಂದಿ ಮಾತ್ರವಲ್ಲದೆ ಮೇಲಾಧಿಕಾರಿಗಳನ್ನೂ ಕೂಡ ಸಂಸ್ಪೆಂಡ್ ಮಾಡಿದ್ದೇವೆ ಎಂದು ತಿಳಿಸಿದರು.

 

ಜೈಲಿನಲ್ಲಿರುವ ಕೈದಿಗಳಿಗೆ ಸಿಗರೇಟ್, ಟೀ, ಕುರ್ಚಿಯನ್ನು ಯಾರು ತಂದು ಕೊಟ್ಟರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಮೂರು ಎಫ್ಐಆರ್ ದಾಖಲು ಮಾಡಲಾಗಿದೆ. ಜೈಲಿನ ವಾರ್ಡನ್ ಸೇರಿ ಹಲವರ ಮೇಲೆ ಎಫ್ಐಆರ್ ಆಗಿದೆ ಎಂದು ಗೃಹ ಸಚಿವರು ಹೇಳಿದರು.

About The Author