ದೇಶದಾದ್ಯಂತ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ಅದ್ರಲ್ಲೂ ಕೋಲ್ಕತ್ತಾ ಟ್ರೈನಿ ವೈದ್ಯೆ ಪ್ರಕರಣ ಮತ್ತು ಮಹಾರಾಷ್ಟ್ರದಲ್ಲಿ ಇಬ್ಬರು ಮಕ್ಕಳ ಮೇಲಿನ ಅತ್ಯಾಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣ ಬೆನ್ನಲ್ಲೇ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.
ವೀಕ್ಷಕರೇ.. ಅತ್ಯಾಚಾರ ಪ್ರಕರಣಗಳು ಕೇಳಿ ಬರ್ತಿರೋದು ಇಂದು ನಿನ್ನೆಯದ್ದಲ್ಲ.. ದಿನಪ್ರತಿ ದೇಶದಲ್ಲಿ ಹತ್ತಾರು ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತವೆ. ಈ ಪೈಕಿ ಯಾವೊದೇ ಒಂದು ಘಟನೆ ಮಾತ್ರ ಹೊರಗೆ ಬರುತ್ತದೆ. ಈ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ರಾಜಕಾರಣಗಳು ಕೂಡ ಹೊರತಾಗಿಲ್ಲ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ೧೫೧ ಹಾಲಿ ಶಾಸಕರು ಹಾಗೂ ಸಂಸದರ ಮೇಲೆ ಲೈಂಗಿಕ ದೌರ್ಜನ್ಯ ದೂರುಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟಿದೆ.
2019 ರಿಂದ 2024ರ ನಡುವೆ ವಿವಿಧ ಚುನಾವಣೆಗಳ ಸಂದರ್ಭದಲ್ಲಿ ದೇಶದ ರಾಜಕಾರಣಿಗಳು ಸಲ್ಲಿಸಿರುವ 4809 ಅಫಿಡವಿಟ್ಗಳ ಪೈಕಿ 4693 ಅನ್ನು ಎಡಿಆರ್ ಪರಿಶೀಲನೆ ಮಾಡಿದೆ. ಇದ್ರಲ್ಲಿ 16 ಸಂಸದರು ಹಾಗೂ 135 ಶಾಸಕರು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಈ ಪ್ರಕರಣಗಳಲ್ಲಿ ಹೆಚ್ಚಾಗಿ ಸಿಲುಕಿಕೊಂಡಿರೋದೇ ಪಶ್ಚಿಮ ಬಂಗಾಳದ ಸಂಸದರು ಹಾಗೂ ಶಾಸಕರು ಎಂದು ವರದಿ ತಿಳಿಸಿದೆ. ಬಂಗಾಳದ ಒಟ್ಟು 25 ಸಂಸದರು ಹಾಗೂ ಶಾಸಕರು ಲೈಂಗಿಕ ಕಿರುಕುಳ ಪ್ರಕರಣವನ್ನು ಎದುರಿಸ್ತಿದ್ದಾರೆ.
ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದ್ದು, 21 ಶಾಸಕರು ಲೈಂಗಿಕ ಕಿರುಕುಳದಂತಹ ಗಂಭೀರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಹಾಗೂ ಒಡಿಶಾ ಮೂರನೇ ಸ್ಥಾನದಲ್ಲಿದ್ದು, 17 ಮಂದಿ ಶಾಸಕರ ವಿರುದ್ಧ ಮಹಿಳೆಯ ಮೇಲಿನ ದೌರ್ಜನ್ಯದ ಪ್ರಕರಣಗಳಿವೆ.
ಗಮನಿಸಬೇಕಾದ ಸಂಗತಿ ಎಂದರೆ, ಲೈಂಗಿಕ ಕಿರುಕುಳ ಪ್ರಕರಣವನ್ನು ರಾಷ್ಟ್ರೀಯ ಪಕ್ಷಗಳ ಶಾಸಕರೂ ಕೂಡ ಎದುರಿಸುತ್ತಿದ್ದಾರೆ. ಬಿಜೆಪಿ 54 ಮಂದಿ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಕಾಂಗ್ರೆಸ್ನ 23, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಾರ್ಟಿಯ 17 ಮಂದಿ ಪ್ರಕರಣವನ್ನು ಎದುರಿಸ್ತಿದ್ದಾರೆ.
ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳೇ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಎದುರಿಸ್ತಿರೋದು ನಿಜಕ್ಕೂ ದೊಡ್ಡ ದುರಂತವೇ ಸರಿ. ಜನರು ಎಲ್ಲಿಯವರೆಗೆ ಬದಲಾಗಲ್ಲವೋ ಅಲ್ಲಿಯವರೆಗೆ ಸಮಾಜ ಬದಲಾಗೋದಿಲ್ಲ. ಕಾನೂನಿನ ಪ್ರಕರಣದಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಎದುರಿಸ್ತಿರೋ ಆರೋಪಿಗಳು 10 ರಿಂದ ಜೀವಾವಧಿ ಶಿಕ್ಷೆಗೆ ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕಿದೆ.