ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಒಂದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗದ ನಿಯಮಾವಳಿಗಳಿಗೆ ಅನುಮೋದನೆ ನೀಡಿದೆ. ಈ ಆಯೋಗವು ಕೇಂದ್ರ ಸರ್ಕಾರಿ ನೌಕರರ ಸಂಬಳ, ಭತ್ಯೆಗಳು ಹಾಗೂ ಇತರ ಸೌಲಭ್ಯಗಳಲ್ಲಿ ಬದಲಾವಣೆ ಮಾಡಲು ಶಿಫಾರಸು ಸಲ್ಲಿಸಲಿದೆ. ಈ ನಿರ್ಧಾರದಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ನೇರವಾಗಿ ಲಾಭ ಪಡೆಯಲಿದ್ದಾರೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು 8ನೇ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. IIM ಬೆಂಗಳೂರಿನ ಪ್ರಾಧ್ಯಾಪಕ ಪುಲಕ್ ಘೋಷ್ ಅವರು ಅರೆಕಾಲಿಕ ಸದಸ್ಯರಾಗಿದ್ದು, ಇಂಧನ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಯೋಗವು ತಾತ್ಕಾಲಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ರಚನೆಯಾದ 18 ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಅಗತ್ಯವಿದ್ದರೆ ಆಯೋಗವು ಮಧ್ಯಂತರ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. 8 ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಕೇಳಿದಾಗ, ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಅನುಷ್ಠಾನದ ನಿರ್ದಿಷ್ಟ ದಿನಾಂಕವನ್ನು ಮಧ್ಯಂತರ ವರದಿ ಬಂದ ನಂತರ ನಿರ್ಧರಿಸಲಾಗುತ್ತದೆ. ಆದರೆ, ಬಹುತೇಕ ಜನವರಿ 1, 2026 ರಂದು ಇದು ಜಾರಿಗೆ ಬರಬಹುದು ಎಂದು ತಿಳಿಸಿದರು.
ಸರ್ಕಾರದ ಪ್ರಕಾರ, ಆಯೋಗವು ಶಿಫಾರಸು ನೀಡುವಾಗ ದೇಶದ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಶಿಸ್ತಿನ ಅಗತ್ಯತೆ, ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಬೇಕಾದ ನಿಧಿ, ಪಿಂಚಣಿ ಯೋಜನೆಗಳ ಹಣಕಾಸಿನ ಭಾರ, ಹಾಗೂ ಕೇಂದ್ರ ಮತ್ತು ರಾಜ್ಯಗಳ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನೂ ಪರಿಗಣಿಸಬೇಕಾಗಿದೆ.
ಹಿಂದಿನ ವೇತನ ಆಯೋಗಗಳಂತೆಯೇ, 8ನೇ ವೇತನ ಆಯೋಗವು ಜೀವನ ವೆಚ್ಚ, ಹಣದುಬ್ಬರ ಮತ್ತು ಆರ್ಥಿಕ ಸೂಚ್ಯಂಕಗಳನ್ನು ಪರಿಗಣಿಸಿ ನೌಕರರ ವೇತನ ಪರಿಷ್ಕರಣೆ ಶಿಫಾರಸು ಮಾಡಲಿದೆ. ಇದು ಕೇವಲ ಕೇಂದ್ರ ಸರ್ಕಾರಿ ನೌಕರರಿಗಷ್ಟೇ ಅಲ್ಲ, ಪಿಂಚಣಿದಾರರು ಹಾಗೂ ಕೆಲವು ಸರ್ಕಾರಿ ಉದ್ಯಮಗಳ ನೌಕರರಿಗೂ ಪರಿಣಾಮ ಬೀರಲಿದೆ.
ವರದಿ : ಲಾವಣ್ಯ ಅನಿಗೋಳ

