Friday, November 21, 2025

Latest Posts

ಪಡಿತರ ವ್ಯವಸ್ಥೆಗೆ ಬೂಸ್ಟ್! ಪ್ರತಿ ಕ್ವಿಂಟಾಲ್‌ಗೆ 27 ರೂ. ಹೆಚ್ಚಳ

- Advertisement -

ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳಕ್ಕೆ ನೀಡಲಾಗುವ ಕಮಿಷನ್‌ ದರವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 27 ರೂ.ಗಳಷ್ಟು ಏರಿಕೆ ಮಾಡುವ ಮೂಲಕ ಸೊಸೈಟಿಗಳ ಬಲವರ್ಧನೆಗೆ ಮಹತ್ವದ ಕ್ರಮ ಕೈಗೊಂಡಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಿಸಿದ್ದ ಸಮಿತಿಯ ಶಿಫಾರಸಿನ ಅನ್ವಯ ಪ್ರಧಾನಿ ನರೇಂದ್ರ ಮೋದಿ ಈ ತೀರ್ಮಾನಕ್ಕೆ ಅನುಮೋದನೆ ನೀಡಿದ್ದು, ದೇಶದ ಪಡಿತರ ವ್ಯವಸ್ಥೆಯ ಶಕ್ತಿ ವೃದ್ಧಿಗೆ ಇದು ಪ್ರೋತ್ಸಾಹದ ಹೆಜ್ಜೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮದೊಂದಿಗೆ ರಾಜ್ಯಗಳಲ್ಲಿ ಧಾನ್ಯಗಳ ಸಂಗ್ರಹಣೆ ಹೆಚ್ಚಳಕ್ಕೆ ಉತ್ತೇಜನ ಸಿಗಲಿದೆ ಮತ್ತು ಸ್ಥಳೀಯ ಮಟ್ಟದಲ್ಲಿ ಸೊಸೈಟಿಗಳ ಬಲವರ್ಧನೆಗೂ ಸಹಕಾರಿಯಾಗಲಿದೆ. ಇದರಿಂದ ಕೇಂದ್ರ ಸರ್ಕಾರದ ‘ಶ್ರೀ ಅನ್ನ’ ಯೋಜನೆಗೂ ಹೆಚ್ಚಿನ ಬಲ ದೊರಕಲಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ರಾಜ್ಯಗಳಿಗೆ ಪಾವತಿಸಲಾಗುತ್ತಿದ್ದ ಕಮಿಷನ್‌ ದರ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 11.75 ರೂ., ಜೋಳ ಮತ್ತು ರಾಗಿಗೆ 15 ರೂ.ಗಳಿತ್ತು. ಈಗ ಅದನ್ನು ಎಲ್ಲಕ್ಕೂ ಸಮಾನವಾಗಿ 27 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ದರ PMGKAY, PM ಪೋಷಣ್ ಮತ್ತು WBNP ಯೋಜನೆಗಳ ಅಡಿಯಲ್ಲಿ ವಿತರಿಸಲ್ಪಡುವ ಧಾನ್ಯಗಳಿಗೆ ಅನ್ವಯವಾಗಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಪಡಿತರ ಧಾನ್ಯಗಳ ಕಮಿಷನ್‌ ಪರಿಷ್ಕರಣೆಯ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ, DFPD ED, FCI ಪ್ರತಿನಿಧಿಗಳು ಮತ್ತು ಇಬ್ಬರು ರಾಜ್ಯ ಆಹಾರ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿಯು ರಾಗಿ, ಜೋಳ ಮತ್ತು ಮೆಕ್ಕೆಜೋಳಕ್ಕೆ ನೀಡಲಾಗುವ ಕಮಿಷನ್‌ ಅನ್ನು ಗೋಧಿಗೆ ಸಮಾನಗೊಳಿಸಬೇಕೆಂದು ಶಿಫಾರಸು ಮಾಡಿತ್ತು. ಅದರ ಅನ್ವಯ ಇದೀಗ ಪರಿಷ್ಕರಣೆ ಜಾರಿಗೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss