ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಸ್ಫೋಟಕ್ಕೂ ಮುನ್ನ ಹುಂಡೈ ಐ20 ಕಾರು ಮಸೀದಿಯೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಾರು ಮಧ್ಯಾಹ್ನ 3:19ಕ್ಕೆ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದೆ. ಸಂಜೆ 6:48ಕ್ಕೆ ನಿರ್ಗಮಿಸಿದೆ. ಪಾರ್ಕಿಂಗ್‌ನಿಂದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ, ಸಂಜೆ 6:52ರಿಂದ 7:00ರ ನಡುವೆ ಕಾರು ಕೆಂಪುಕೋಟೆ ಬಳಿಯಲ್ಲಿ ಸ್ಫೋಟಗೊಂಡಿದೆ.
ದೃಶ್ಯಾವಳಿಗಳಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ವ್ಯಕ್ತಿ ಒಬ್ಬನೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾನೆ. ಕಾರು ಪಾರ್ಕಿಂಗ್‌ನಿಂದ ಹೊರಬಂದ ಬಳಿಕ ಅದು ಯಾವ ಮಾರ್ಗದಿಂದ ದರ್ಯಗಂಜ್ ಕಡೆಗೆ ತೆರಳಿತು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಇದರ ಮಧ್ಯೆ, ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲ್ಪಟ್ಟಿರುವ ಡಾ. ಉಮರ್ ಮೊಹಮ್ಮದ್ ಎಂಬಾತನ ಮೊದಲ ಚಿತ್ರ ಬಹಿರಂಗವಾಗಿದೆ. ಉಮರ್, ಇನ್ನೂ ಇಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಿದ್ದಾನೆ. ಕಾರಿನಲ್ಲಿ ಡಿಟೋನೇಟರ್ ಅಳವಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಈಗ ಕಾರಿನಲ್ಲಿ ಇದ್ದ ಮೃತದೇಹದ ಡಿಎನ್‌ಎ ಪರೀಕ್ಷೆ ನಡೆಸಿ, ಅದು ಉಮರ್ ಮೊಹಮ್ಮದ್‌ನದ್ದೇ ಎಂದು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ತನಿಖೆ ಮುಂದುವರಿದಿದ್ದು, ದೆಹಲಿಯ ಭದ್ರತಾ ವ್ಯವಸ್ಥೆ ತೀವ್ರಗೊಳಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

