ಮಗನ ಎದುರೇ ಪತ್ನಿಗೆ ಬೆಂಕಿ ಇಟ್ಟ ಕ್ರೂರಿ

ಜಗತ್ತು ಎಷ್ಟೇ ಮುಂದುವರಿದರೂ, ಇಂದಿಗೂ ವರದಕ್ಷಿಣೆ ಕಿರುಕುಳ ಮಾತ್ರ ನಿಂತಿಲ್ಲ. ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಮನುಷ್ಯ ಕುಲವೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ. ವರದಕ್ಷಿಣೆಗಾಗಿ ಪತ್ನಿಯನ್ನೇ ಜೀವಂತವಾಗಿ ಪತಿಯೇ ಸುಟ್ಟು ಹಾಕಿದ್ದಾನೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಆತನ 6 ವರ್ಷದ ಮಗ.

ತಾಯಿಯ ಮೇಲಾದ ದೌರ್ಜನ್ಯ, ಆಕೆಯ ಸಾವಿನ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾನೆ. ನನ್ನ ಅಮ್ಮನ ಮೈಮೇಲೆ ಏನೋ ಸುರಿದರು. ಕೆನ್ನೆಗೆ ಹೊಡೆದು ಲೈಟರ್‌ನಿಂದ ಬೆಂಕಿ ಹಚ್ಚಿದರು. ಹೀಗಂತ ಸ್ಥಳೀಯರು, ಪೊಲೀಸರ ಎದುರು ಸತ್ಯ ಹೇಳಿದ್ದಾನೆ.

ನೋಯ್ಡಾದ ಕಸ್ನಾ ಪೊಲೀಸ್‌ ಠಾಣಾ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ಘಟನೆ ನಡೆದಿದೆ. 36 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಿ, ಪತಿ ಮತ್ತು ಅತ್ತೆಯೇ ಕೃತ್ಯ ಎಸಗಿದ್ದಾರೆ. ಮಹಿಳೆಯ ಸಹೋದರಿ ಮತ್ತು ಆಕೆಯ ಮಗನ ಎದುರೇ ಹತ್ಯೆ ಮಾಡಿದ್ದಾರೆ. 28 ವರ್ಷದ ನಿಕ್ಕಿ ಎಂಬಾಕೆ ಭೀಕರವಾಗಿ ಹತ್ಯೆಗೀಡಾಗಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಈ ವಿಡಿಯೋಗಳನ್ನು ಮಾಡಿದ್ದು ನಿಕ್ಕಿ ಸಹೋದರಿ.

10 ವರ್ಷಗಳ ಹಿಂದೆ ವಿಪಿನ್‌ ಎಂಬಾತನ ಜೊತೆ ನಿಕ್ಕಿ ಭಾಟಿ ಮದುವೆಯಾಗಿತ್ತು. ಕೆಲ ದಿನಗಳ ಬಳಿಕ ವರದಕ್ಷಿಣೆಗಾಗಿ ಪ್ರತಿದಿನ ಪೀಡಿಸುತ್ತಿದ್ರು. ದೌರ್ಜನ್ಯ ಎಸಗುತ್ತಿದ್ರು. ಆಗಸ್ಟ್‌ 21ರ ಗುರುವಾರ ಮತ್ತೆ ಜಗಳ ಶುರುವಾಗಿದೆ. ಈ ಬಾರಿ ಹಣ ತರಲು ನಿಕ್ಕಿ ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಪತಿ, ಅತ್ತೆ ಸೇರಿಕೊಂಡು, ನಿಕ್ಕಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ನಿಕ್ಕಿ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಕಸ್ನಾ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಆಕೆಯ ತಂಗಿ ಕಾಂಚನ್‌ಳನ್ನ, ವಿಪಿನ್‌ ಸಹೋದರ ರೋಹಿತ್‌ ಮದುವೆಯಾಗಿದ್ದ. ಸದ್ಯ, ಕಾಂಚನ್ ದೂರಿನನ್ವಯ, ನಿಕ್ಕಿಯ ಗಂಡ ವಿಪಿನ್ ಭಾಟಿ, ಆತನ ಸಹೋದರ ರೋಹಿತ್ ಭಾಟಿ, ಅತ್ತೆ ದಯಾ ಮತ್ತು ಮಾವ ಸತ್‌ವೀರ್ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ ನಿಕ್ಕಿ ಗಂಡನನ್ನ ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಲಾಗ್ತಿದೆ.

ನಿಕ್ಕಿ ಪತಿಯ ಮನೆಯವರು ವರದಕ್ಷಿಣೆಯಾಗಿ ಸ್ಕಾರ್ಪಿಯೋ ಕೇಳಿದ್ದಾರೆ. ಬಳಿಕ ಬುಲೆಟ್‌ ಬೈಕ್‌ಗೆ ಡಿಮ್ಯಾಂಡ್‌ ಮಾಡಿದ್ರು. ಎರಡನ್ನೂ ಕೊಡಿಸಲಾಗಿತ್ತು. ಬಳಿಕವೂ ತನ್ನ ಮಗಳಿಗೆ ಕಿರುಕುಳ ಕೊಡ್ತಿದ್ರು.
ಹೀಗಂತ ನಿಕ್ಕಿ ಅಪ್ಪ ಹೇಳಿದ್ದಾರೆ. ಜೊತೆಗೆ ಆರೋಪಿಗಳನ್ನು ಗಲ್ಲಿಗೇರಿಸಿ ಅಥವಾ ಎನ್‌ಕೌಂಟರ್‌ ಮಾಡುವಂತೆ, ಯೋಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

About The Author