2015, 2016ರಲ್ಲಿ ಕೇಂದ್ರ ಸರ್ಕಾರವು ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಸತತ 2 ಬಾರಿ ಅಗ್ರಸ್ಥಾನ ಪಡೆದಿತ್ತು, ನಂತರ ರ್ಯಾಂಕಿಂಗ್‌ನಲ್ಲಿ ಕುಸಿತವನ್ನೇ ಕಂಡಿತ್ತು. ಆದರೆ ದಶಕದ ಬಳಿಕ 2024-25ನೇ ಸಾಲಿನ ಸೂಪರ್ ಸ್ವಚ್ಛ ನಗರ ಲೀಗ್ ನಲ್ಲಿ ‘ಸ್ವಚ್ಛ ನಗರಿ’ ಶ್ರೇಯಕ್ಕೆ ಮೈಸೂರು ಮತ್ತೆ ಪಾತ್ರವಾಗಿದೆ. ಇದು ಮೈಸೂರಿಗರಿಗೆ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದರು ತಪ್ಪಾಗುವುದಿಲ್ಲ.
ಸೂಪರ್ ಸ್ವಚ್ಛ ನಗರ ಲೀಗ್ ನಲ್ಲಿ 3-10 ಲಕ್ಷ ಜನಸಂಖ್ಯೆಯೊಳಗಿನ ಈ ವಿಭಾಗದಲ್ಲಿ ಉತ್ತರ ಪ್ರದೇಶದ ನೊಯಿಡಾ, ಚಂಡೀಗಢ ನಂತರ ಮೈಸೂರು ಸ್ಥಾನ ಪಡೆದಿದೆ. 2017ರಲ್ಲಿ 5ನೇ ಸ್ಥಾನ ಕಂಡಿತ್ತು. 2021ರಲ್ಲಿ 11 ಸ್ಥಾನ ಪಡೆದದ್ದನ್ನು ಬಿಟ್ಟರೆ ಟಾಪ್-10ರೊಳಗೆ ಸ್ಥಾನ ಪಡೆಯುತ್ತಿತ್ತು. 2023-24ನೇ ಸಾಲಿನಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. ಅತ್ಯಂತ ಸ್ವಚ್ಛನಗರಿ ವಿಭಾಗದಲ್ಲಿ ಇಂದೋರ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಮೈಸೂರು ಮೂರನೇ ಸ್ಥಾನ ಪಡೆದಿದೆ.
ವಿಶೇಷವಾಗಿ ಈ ವರ್ಷದಿಂದ ಸೂಪರ್ ಸ್ವಚ್ಛ ನಗರ ಲೀಗ್ ಎನ್ನುವ ಹೊಸ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಈ ವಿಭಾಗದಲ್ಲಿ ರಾಜ್ಯದಲ್ಲಿ ಮೈಸೂರು ಮಾತ್ರವೇ ಸ್ಥಾನ ಪಡೆದಿದೆ. ನಗರದಲ್ಲಿ ನಿತ್ಯವೂ ಸ್ವಚ್ಛತೆಗೆ ಕ್ರಮ ಕೈಗೊಂಡಿರುವುದು. ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಶೌಚಾಲಯಗಳ ದುರಸ್ತಿ ಮತ್ತು ಬಳಕೆ, ಸೀವೇಜ್ ಫಾರಂನಲ್ಲಿ ಕಸ ವಿಲೇವಾರಿಗೆ ಕ್ರಮ, ಘನ ತ್ಯಾಜ್ಯ ವಿಲೇವಾರಿ, ಕಟ್ಟಡ ತ್ಯಾಜ್ಯ ಹಾಗೂ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಗೆ ಟೆಂಡರ್ ಕರೆದಿರುವುದನ್ನು ಸ್ವಚ್ಛ ಸರ್ವೇಕ್ಷಣಾ ತಂಡ ಗಮನಿಸಿತ್ತು. ಈ ಎಲ್ಲಾ ಅಂಶಗಳು ಪ್ರಶಸ್ತಿಯ ಗರಿ ಲಭಿಸಲು ಕಾರಣವಾಗಿವೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಪಾಲಿಕೆ ಆಯುಕ್ತ ಶೇಖ್ ತಸ್ವೀರ್ ಆಸೀಫ್ ಅವರಿಗೆ ರಾಷ್ಟ್ರಪತಿ ದೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ