ಸಾಮಾನ್ಯವಾಗಿ ನಾವು ಕೆಂಪು ಕಲ್ಲಂಗಡಿ ಹಣ್ಣು ತಿಂದಿರುತ್ತೇವೆ. ದೇಹಕ್ಕೂ ತಂಪು, ಬಿಸಿಲಿನ ಅರೋಗ್ಯಕ್ಕೆ ರಾಮಬಾಣ. ಇಲ್ಲೊಬ್ಬ ರೈತರು ತಮ್ಮ ತೋಟದಲ್ಲಿ ಹೊಸ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಹಳದಿ ಕಲ್ಲಂಗಡಿ ಹಣ್ಣು ಬೆಳೆಯುವ ಮೂಲಕ ಕೃಷಿಯಲ್ಲಿ ವಿನೂತನ ಪ್ರಯೋಗ ಮಾಡಿದ್ದಾರೆ.
ಅಂದ ಹಾಗೇ ಈ ರೈತನ ಹೆಸರು ಬಸವರಾಜ್ ಪಟೀಲ್, ಕಲಬುರ್ಗಿಯ ಕೊರಳ್ಳಿ ಗ್ರಾಮದ ಈ ರೈತ ಪದವಿಯನ್ನು ಪೂರೈಸಿ, ಸುಮಾರು ಎಂಟತ್ತು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನಗರ, ಬಿಗ್ ಬಜಾರ್ ಮತ್ತು ಮಾರ್ಟ್ಗಳಿಗೆ ಮಾರಾಟ ಮಾಡಿ ಇದುವೆರಗೂ ಲಕ್ಷ ಲಕ್ಷ ಅದಾಯ ಗಳಿಸಿದ್ದಾರೆ. ಕೃಷಿಯಲ್ಲಿ ವಿನೂತ ಪ್ರಯೋಗ ಮಾಡಿ, ಅದಾಯ ಹೆಚ್ಚಿಸಿಕೊಳ್ಳಬೇಕು ಎಂದು ತಿರ್ಮಾನಿಸಿ ಸೋಷಿಯಲ್ ಮೀಡಿಯಾ ಮತ್ತು ಇಂಟರ್‌ನೆಟ್ ಮೊರೆ ಹೋಗಿದ್ದಾರೆ. ಯುಟ್ಯೂಬ್‌ನಲ್ಲಿ ಸರ್ಚ್ ಮಾಡಿ, ಹಳದಿ ಕಲ್ಲಂಗಡಿ ಹಣ್ಣಿನ ತಳಿಯ ಮಾಹಿತಿಯನ್ನು ಪಡೆದು ಜರ್ಮನಿಯಿಂದ ಬೀಜಗಳನ್ನು ತರಸಿಕೊಂಡು ಹಳದಿ ಕಲ್ಲಂಗಡಿ ಬೆಳೆದು ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕೆಂಪು ಕಲ್ಲಂಗಡಿಗಿಂತಲೂ ಹಳದಿ ಕಲ್ಲಂಗಡಿ ಹೆಚ್ಚು ರುಚಿಯಾಗಿದ್ದು, ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಉಪಯುಕ್ತವಾಗಿದೆ. ಆದ್ದರಿಂದ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಕೆಂಪು ಕಲ್ಲಂಗಡಿ ಮಾರುಕಟ್ಟೆಯಲ್ಲಿ ಟನ್‌ಗೆ 5 ರಿಂದ 7 ಸಾವಿರಕ್ಕೆ ಮಾರಾಟವಾಗುತ್ತಿದ್ದು, ಹಳದಿ ಕಲ್ಲಂಗಡಿಗೆ ಒಂದು ಟನ್‌ಗೆ 15 ಸಾವಿರದವೆರಗೂ ಬೆಲೆ ಇದೆ. ಇದು ರೈತರಿಗೆ ಅದಾಯ ತಂದುಕೊಡುವುದಲ್ಲದೇ, ಕೃಷಿಯಲ್ಲಿ ನಷ್ಟದಿಂದ ಹೊರ ಬರಬಹುದು ಎಂದು ರೈತ ಬಸವರಾಜ್ ಪಟೀಲ್ ಹೇಳುತ್ತಾರೆ.
ಆಫ್ರಿಕಾ ಖಂಡದಲ್ಲಿ ಹಳದಿ ಕಲ್ಲಂಗಡಿಗಳನ್ನು ಹೆಚ್ಚು ಬೆಳೆಯಲಾಗುತ್ತದೆ. ಉಷ್ಣವಲಯದ ದೇಶಗಳಲ್ಲೂ ಕೂಡ ಬೆಳೆಯುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚು ಉಷ್ಣಾಂಶವಿದ್ದು ಹಳದಿ ಕಲ್ಲಂಗಡಿ ಬೆಳೆಯಲು ತುಂಬಾ ಅನುಕೂಲಕರವಾಗಿದೆ. ಕೃಷಿಯಲ್ಲಿ ಏನು ಲಾಭ ಇಲ್ಲ ಎನ್ನುವವರು, ಹೊಸ ಹೊಸ ವಿನೂತನ ಪ್ರಯೋಗಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳ ಬಹುದಾಗಿದೆ.