ಮಂಡ್ಯ ಡಿಸಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವನ್ನಪ್ಪಿದ್ದಾರೆ. ರೈತ ಮಂಜೇಗೌಡ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ನಿವಾಸಿ. ಭೂಸ್ವಾಧೀನಗೊಂಡಿದ್ದ ಜಮೀನಿಗೆ ಹಲವಾರು ವರ್ಷಗಳಿಂದ ಪರಿಹಾರ ಸಿಕ್ಕಿರಲಿಲ್ಲ. ಅರ್ಜಿ ಸಲ್ಲಿಸಿದ್ರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲವಂತೆ. ತಾಲೂಕು ಕಚೇರಿಗೆ ಅಲೆದು ಅಲೆದು ರೋಸಿ ಹೋಗಿದ್ರು. ಜಿಲ್ಲಾಧಿಕಾರಿ ಕಚೇರಿಗೂ ಹಲವು ಬಾರಿ ಬಂದರೂ ಸಮಸ್ಯೆ ಬಗೆಹರಿಸಿರಲಿಲ್ಲ.
ಹೀಗಾಗಿ ಮನನೊಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು, ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ರು. ರೈತ ಮಂಜೇಗೌಡ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಸಾರ್ವಜನಿಕರು, ಪೊಲೀಸರು ಬೆಂಕಿ ನಂದಿಸಿದ್ದಾರೆ. ತಕ್ಷಣವೇ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 55 ವರ್ಷದ ಮಂಜೇಗೌಡ ಸಾವನ್ನಪ್ಪಿದ್ದಾರೆ. ದೇಹ ಶೇಕಡ 80ರಷ್ಟು ಸುಟ್ಟು ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರೊಬ್ಬರು ಬಲಿಯಾಗಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

