ಧಾರವಾಡದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ – ASI, ಕಾನ್ಸ್‌ಟೇಬಲ್ ಅಮಾನತು!

ಧಾರವಾಡದ ಸಪ್ತಾಪುರ ವಿವೇಕಾನಂದ ಸರ್ಕಲ್‌ ಬಳಿ ನಡೆದ ಮಾಜಿ ಸೈನಿಕನ ಮೇಲಿನ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಇಬ್ಬರು ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ASI ವಿದ್ಯಾನಂದ ಸುಬೇದಾರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ರಾಜಪ್ಪ ಕಣಬೂರ್ ಅವರನ್ನು ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.

ಘಟನೆ ಕಳೆದ ಭಾನುವಾರ ರಾತ್ರಿ ನಡೆದಿದೆ. ಮಾಜಿ ಸೈನಿಕ ಹಾಗೂ ಮೆಸ್ ಮಾಲೀಕರಾದ ರಾಮಪ್ಪ ನಿಪ್ಪಾಣಿ ತಮ್ಮ ಕುಟುಂಬದವರೊಂದಿಗೆ ಮೆಸ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ, ASI ಸುಬೇದಾರ್ ಅಲ್ಲಿ ಬಂದು ಮೆಸ್ ಇನ್ನೂ ಮುಚ್ಚಿಲ್ಲವೇ? ಎಂದು ಪ್ರಶ್ನಿಸಿದ್ದರು. ಇದರಿಂದ ಮಾತಿನ ಚಕಮಕಿ ಉಂಟಾಗಿದೆ. ASI ಹಾಗೂ ಕಾನ್ಸ್‌ಟೇಬಲ್ ಇಬ್ಬರೂ ಸೇರಿ ಹೆಲ್ಮೆಟ್ ಮತ್ತು ಕಟ್ಟಿಗೆಯಿಂದ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ರಾಮಪ್ಪ ನಿಪ್ಪಾಣಿಯನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿಯುತ್ತಿದೆ. ಘಟನೆಯ ನಂತರ ಸ್ವತಃ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು, ಸಿಬ್ಬಂದಿಗಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಲಂಕುಶ ಪರಿಶೀಲನೆಯ ನಂತರ, ಇಬ್ಬರು ಪೊಲೀಸರ ಅಮಾನತು ಸೇರಿದಂತೆ, ಪ್ರಕರಣದ ಕುರಿತು ನಿಸ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author