Monday, October 13, 2025

Latest Posts

ಮೈಸೂರಲ್ಲಿ ಮೊದಲ ಬಾರಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ!

- Advertisement -

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಗರದ ಓವೆಲ್ ಮೈದಾನದಲ್ಲಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ತಿಳಿಸಿದರು. ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯೋತ್ಸವ ದಿನದ ಬೆಳಿಗ್ಗೆ 9 ಗಂಟೆಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದಕ್ಕೂ ಮುಂಚೆ ಬೆಳಿಗ್ಗೆ 8 ಗಂಟೆಗೆ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಚಿವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಓವೆಲ್ ಮೈದಾನದವರೆಗೆ ನಡೆಯುವ ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಪೊಲೀಸ್ ಬ್ಯಾಂಡ್ ಹಾಗೂ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.

ಮಹಾನಗರ ಪಾಲಿಕೆ ವೇದಿಕೆ, ಶಾಮಿಯಾನ, ಆಸನ ವ್ಯವಸ್ಥೆ, ಅಲಂಕಾರ ಹಾಗೂ ಆಹ್ವಾನಪತ್ರಿಕೆ ಮುದ್ರಣದ ಜವಾಬ್ದಾರಿ ವಹಿಸಿಕೊಳ್ಳಲಿದೆ. ಗಣ್ಯರನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೆರವಣಿಗೆಯ ಕಲಾತಂಡಗಳ ಆಯ್ಕೆ ಹಾಗೂ ವ್ಯವಸ್ಥೆ ನೋಡಿಕೊಳ್ಳಲಿದೆ. ಸ್ತಬ್ಧಚಿತ್ರಗಳಲ್ಲಿ ಕನ್ನಡ ಭಾಷೆಯ ಹಿರಿಮೆ ಮತ್ತು ಗರಿಮೆಯನ್ನು ಸಾರುವ ವಿಷಯಗಳನ್ನೇ ಒಳಗೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಡಗೀತೆ ರಚನೆಗೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ವಿಶೇಷ ಸ್ತಬ್ಧಚಿತ್ರವನ್ನೂ ಸಿದ್ಧಪಡಿಸುವ ಸಲಹೆ ನೀಡಲಾಯಿತು.

ಎಲ್ಲಾ ಸರ್ಕಾರಿ ನೌಕರರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಸ್ಥಳದಲ್ಲಿಯೇ ಹಾಜರಾತಿ ಪಡೆಯಲಾಗುವುದು ಎಂದು ಪಿ. ಶಿವರಾಜು ಸ್ಪಷ್ಟಪಡಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss