ಆಂಧ್ರ ಪ್ರದೇಶದಲ್ಲಿ ಕಳೆದ ಬಾರಿ ಅಧಿಕಾರದಲ್ಲಿದ್ದ ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ವಿಷಾಖಪಟ್ಟಣದ ಋಷಿಕೊಂಡ ಬೆಟ್ಟದ ಮೇಲೆ ನಿರ್ಮಾಣ ಮಾಡಿದ ಐಷಾರಾಮಿ ಬಂಗಲೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಆತ್ಮವಿಶ್ವಾಸದಿಂದ ಜಗನ್ ಮೋಹನ್ ರೆಡ್ಡಿ, ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 500ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಕಟ್ಟಡ ನಿರ್ಮಾಣ ಮಾಡಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರವಾಸೋದ್ಯಮದ ಉತ್ತೇಜನದ ಹೆಸರಿನಲ್ಲಿ ಜಗನ್ ತಮ್ಮ ಸ್ವಂತ ಬಳಕೆಗೆ ಈ ಬಂಗಲೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ. ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅವ್ಯವಹಾರಗಳು ಕೂಡ ನಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ಮುಗಿದ ಆಂಧ್ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷವು ಗೆದ್ದುಅಧಿಕಾರಕ್ಕೆ ಬಂದ ಬಳಿಕ ಈ ಬಂಗಲೆ ಪ್ರಕರಣವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
ವಿಶಾಖಪಟ್ಟಣಂನ ಸಮುದ್ರ ತಟದಲ್ಲಿರುವ ಋಷಿಕೊಂಡ ಬೆಟ್ಟದ ಮೇಲೆ ಮೊದಲಿದ್ದ ಹರಿಥಾ ರೆಸಾರ್ಟ್ ಮರುಅಭಿವೃದ್ಧಿ ಮಾಡುವುದಾಗಿ 2021ರಲ್ಲಿ ವೈಎಸ್ಆರ್ಸಿಪಿ ಸರ್ಕಾರವು ಘೋಷಣೆ ಮಾಡಿತ್ತು. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಕೈಹಾಕಿತ್ತು. ಪರಿಸರ ನಿಯಮಗಳನ್ನು ಉಲ್ಲಂಘಿಸಿ ಈ ಅಭಿವೃದ್ದಿ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ಅಂದಿನ ವಿರೋಧ ಪಕ್ಷಗಳಾದ ಟಿ.ಡಿ.ಪಿ ಮತ್ತು ಜನಸೇನಾ ಪಕ್ಷಗಳು ಆರೋಪಿಸಿದ್ದವು. ಕಾಮಗಾರಿ ನಡೆಯುವ ಸ್ಥಳಕ್ಕೆ ಪ್ರತಿಪಕ್ಷದ ನಾಯಕರು ಮುತ್ತಿಗೆ ಹಾಕಿದ್ದರು. ಸರ್ಕಾರವು ಈ ಪ್ರತಿಭಟನೆಯನ್ನು ಹತ್ತಿಕ್ಕಿತ್ತು. ಅಲ್ಲದೇ, ಪರಿಸರ ನಿಯಮಗಳನ್ನು ಮೀರಿ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜನಸೇನಾ ನಾಯಕರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಸಮಿತಿ ರಚಿಸಿ, ತನಿಖೆ ನಡೆಸುವಂತೆ ಕೋರ್ಟ್ ಹೇಳಿತ್ತು.
ಈ ಐಷಾರಾಮಿ ಕಟ್ಟಡಗಳ ಒಟ್ಟು ವ್ಯವಸ್ಥೆ ಎಷ್ಟು ಅದ್ಧೂರಿಯಾಗಿದೆಯಂದರೆ ನೋಡಿದವರು ದಂಗಾಗುವ ರೀತಿಯಲ್ಲಿದೆ. ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿವಿಧ ಬ್ಲಾಕ್ಗಳಲ್ಲಿ ಹರಡಿಕೊಂಡಿರುವ ಕಟ್ಟಡವು ವೈಭವದಿಂದ ಕಂಗೊಳಿಸುತ್ತದೆ. 500ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ವೈಭವೋಪೇತ ಬಂಗಲೆಗೆ ಯಾಕಿಷ್ಟು ಕರ್ಚು-ವೆಚ್ಚ ತಗುಲಿದೆ ಎಂದು ನೋಡುವುದಾದರೆ, 95ಕೋಟಿ ರೂ. ಗಳನ್ನು ಕಟ್ಟಡ ನಿರ್ಮಾಣದ ಭೂಮಿ ಸಮತಟ್ಟಕೆಂದೇ ವೆಚ್ಚ ಮಾಡಲಾಗಿದೆ. ಕಟ್ಟಡದ ಒಳಾಂಗಣ ವಿನ್ಯಾಸಕ್ಕೆ 33ಕೋಟಿ ರೂ, ಹೂದೋಟ ನಿರ್ಮಾಣಕ್ಕೆ 22ಕೋಟಿ ರೂ, ಕಟ್ಟಡ ಜಾಗದ ಸೌಂದರ್ಯ ಹೆಚ್ಚಿಸಲು 21ಕೋಟಿ ರೂ, ಸೋಲಾರ್ ವಾಟರ್ ಹೀಟರ್, ಲೈಟಿಂಗ್, ಬಾತ್ ಟಬ್, ವೆಸ್ಟರ್ನ್ ಟಾಯ್ಲೆಟ್ ಸಿಸ್ಟಮ್ ಸೇರಿ ಇನ್ನಿತರ ಮೂಲ ಸೌಕರ್ಯಗಳಿಗೆ ಒಟ್ಟಾರೆಯಾಗಿ 5ಕೋಟಿ ರೂ.ಗೂ ಅಧಿಕ ಹಣವನ್ನು ಕರ್ಚು ಮಾಡಲಾಗಿದೆ.
ಈ ಅರಮನೆಯು ಸ್ನಾನಗೃಹಗಳು ಸೇರಿದಂತೆ ಸಂಪೂರ್ಣ ಸಂಕೀರ್ಣವು ಕೇಂದ್ರ ಹವಾನಿಯಂತ್ರಣ ಸೌಲಭ್ಯವನ್ನು ಹೊಂದಿವೆಯಂತೆ. ವಿಶೇಷ ಆಕರ್ಷಣೆಗಳಲ್ಲಿ ಸಮುದ್ರಕ್ಕೆ ಎದುರಾಗಿರುವ ಡೈನಿಂಗ್ ಹಾಲ್, ಎಲ್ಲಾ ಮಲಗುವ ಕೋಣೆಗಳಲ್ಲಿ 12 ಹಾಸಿಗೆಗಳು ಮತ್ತು ಸ್ನಾನಗೃಹಗಳಲ್ಲಿ ಸ್ಪಾ ಸೌಲಭ್ಯಗಳು ಸೇರಿವೆಯಂತೆ.
ಒಟ್ಟಾರೆಯಾಗಿ ಮಾಜಿ ಸಿ.ಎಂ ಜಗನ್ 2ನೇ ಬಾರಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿದ್ದ ಕಾರಣ ಈ ಐಷಾರಾಮಿ ಬಂಗಲೆಯಲ್ಲಿ ಕಾಲ ಕಳೆಯುವ ಬಯಕೆ ಹೊಂದಿದ್ದರು, ಆ ಆಸೆಯನ್ನೀಗ ಕೈಬಿಡುವಂತಾಗಿದೆ.
Jagan Mohan Reddy: ಜಗನ್ 500 ಕೋಟಿ ಅರಮನೆ ರಹಸ್ಯ!
- Advertisement -
- Advertisement -