ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಶಿರೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂದರ್ಭದಂದು ಸ್ಥಳೀಯರು ತೀವ್ರ ಆಕರ್ಷಣೆಗೆ ಒಳಗಾಗುವಂತಹ ದೃಶ್ಯವೊಂದು ಮೂಡಿಬಂದಿದೆ. ಶಿರೂರ ಗ್ರಾಮ ಪ್ರವೇಶದ ಬಾಗಿಲಿನಲ್ಲೇ ಪ್ರತಿಷ್ಠಾಪಿಸಲಾದ ಜನಪರ ನಾಯಕ ಕೆ.ಎಚ್. ಪಾಟೀಲರ ಪ್ರತಿಮೆ ವಿಭಿನ್ನ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಬೆಳಗುತ್ತಾ ಸಂಚರಿಸುವ ಜನರ ಗಮನ ಸೆಳೆಯುತ್ತಿದೆ.
ಕೆ.ಎಚ್. ಪಾಟೀಲ್ ಕರುನಾಡು ಕಂಡ ಸರ್ವ ಶ್ರೇಷ್ಠ ಜನಪರ ನಾಯಕರು ಹಾಗೂ ಮಾಜಿ ಮಂತ್ರಿಗಳು. ಹುಲಕೋಟಿಯ ಹುಲಿ ಎಂದೇ ಪ್ರಸಿದ್ಧಿ ಪಡೆದ ಹೆಚ್.ಕೆ. ಪಾಟೀಲರ ತಂದೆಯಾದ ಕೆ.ಎಚ್. ಪಾಟೀಲರು, ಕರ್ನಾಟಕದ ಸಹಕಾರಿ ಚಟುವಟಿಕೆಯ ಭೀಷ್ಮ ಎನಿಸಿಕೊಂಡಿದ್ದಾರೆ. ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ರೈತಪರ ಹೋರಾಟಗಳಲ್ಲಿ ಮೆರೆಯುತ್ತಾ ನಾಡಿಗೆ ಅಪಾರ ಕೊಡುಗೆ ನೀಡಿದವರು.
ಸಾಮಾನ್ಯವಾಗಿ ಗದಗ ಜಿಲ್ಲೆಯಲ್ಲಿ ಅವರ ಪ್ರತಿಮೆಗಳನ್ನು ಕಾಣಬಹುದಾದರೂ, ಶಿರೂರ ಗ್ರಾಮದ ಪ್ರಮುಖ ರಸ್ತೆಯ ಬದಿಯಲ್ಲಿ ಕಂಡುಬರುವ ಈ ಪ್ರತಿಮೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ಶಿರೂರ ಗ್ರಾಮ, ಹಿರೇಹಳ್ಳ ಜಲಾಶಯ ಯೋಜನೆಯಿಂದ ಸಂಪೂರ್ಣ ಮುಳುಗಡೆಯಾಗಿ ನಂತರ ಪುನರ್ ವಸತಿ ಗ್ರಾಮವಾಗಿ ರೂಪುಗೊಂಡಿದೆ.
ಈ ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿ ಕೆ.ಎಚ್. ಪಾಟೀಲರ ಪಾತ್ರ ಪ್ರಮುಖವಾಗಿದ್ದ ಹಿನ್ನೆಲೆಯಲ್ಲಿ, ಅವರ ಸ್ಮರಣಾರ್ಥವಾಗಿ 11 ಸೆಪ್ಟೆಂಬರ್ 2024 ರಂದು ಸುಂದರ ಉದ್ಯಾನವನ ನಿರ್ಮಿಸಿ, ಪ್ರತಿಮೆಯ ಅನಾವರಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅವರು ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಸಹಕಾರದೊಂದಿಗೆ ಈ ಸ್ಮಾರಕ ನಿರ್ಮಾಣಗೊಂಡಿದೆ.
ದೀಪಾವಳಿಯ ಬೆಳಕಿನ ಹಬ್ಬದಲ್ಲಿ, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಈ ಪ್ರತಿಮೆ, ಶಿರೂರ ಗ್ರಾಮದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಹಬ್ಬದ ಆತ್ಮೀಯತೆ ಕೈಬಿಸಿ ಕರೆದಂತಿದೆ. ಇದು ಕೇವಲ ಒಂದು ಪ್ರತಿಮೆ ಅಲ್ಲ. ಜನಪರ ನಾಯಕನ ಸ್ಮರಣೆ, ಗ್ರಾಮೀಣ ಬದುಕಿನ ನಿಜವಾದ ಸ್ಪೂರ್ತಿಯ ಪ್ರತೀಕವಾಗಿದೆ.
ವರದಿ : ಲಾವಣ್ಯ ಅನಿಗೋಳ