ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬೀದಿನಾಯಿಗಳ ಹಿಂಡು ಹೆಚ್ಚಾಗಿದ್ದು, ಜನರ ನಿದ್ದೆಗೆಡಿಸಿದೆ. 5ನೇ ವಾರ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಅಕ್ಟೋಬರ್ 29ರ ಬುಧವಾರ ಒಂದೇ ದಿನ 24 ಮಂದಿ ಬಾಲಕರಿಗೆ, ವಯಸ್ಸಾದವರಿಗೆ ಬೀದಿನಾಯಿಗಳು ಕಚ್ಚಿವೆ.
ಪಟ್ಟಣದ ಡಾ. ಹೆಚ್.ಎನ್.ವೃತ್ತ ಸೇರಿದಂತೆ ಗೂಳೂರು, ಕೊತ್ತಪಲ್ಲಿ, ಸಂತೆಮೈದಾನ, ಕುಂಬಾರಪೇಟೆ, ಆವುಲಮಂದೆ, ಪೊಲೀಸ್ ಹಾಗೂ ಆರೋಗ್ಯ ವಸತಿ ಗೃಹಗಳು ಸೇರಿದಂತೆ 23 ವಾರ್ಡ್‌ಗಳ ರಸ್ತೆಗಳಲ್ಲಿ ಬೀದಿನಾಯಿಗಳ ಕಾಟ ಮಿತಿಮೀರಿದೆ.
ರಸ್ತೆಗಳು ಹಾಗೂ ಮನೆಗಳ ಮುಂದೆ ಬಿಸಾಡಿದ ಅನ್ನ, ಮಾಂಸದ ಮೂಳೆಗಳಿಗಾಗಿ ಬೀದಿನಾಯಿಗಳು ಹೆಚ್ಚಾಗಿ ಪಟ್ಟಣದೊಳಗೆ ಓಡಾಡುತ್ತಿದ್ದು, ಪಾದಚಾರಿಗಳು, ವಾಹನ ಸವಾರರನ್ನು ಪರದಾಡುವಂತೆ ಮಾಡಿದೆ. ರಸ್ತೆಗಳಲ್ಲಿ ಸಂಚರಿಸುವವರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ.
ಗೂಳೂರು ರಸ್ತೆಯ 5ನೇ ವಾರ್ಡ್‌ನಲ್ಲಿ ಬೀದಿನಾಯಿಗಳು ರಸ್ತೆಯಲ್ಲಿ ಓಡಾಡುತ್ತಿದ್ದವರ, ಕೈ, ಕಾಲುಗಳಿಗೆ ಕಚ್ಚಿವೆ. ನಾಯಿಗಳು ಕಚ್ಚಿದ ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ನಾಯಿ ಕಡಿತದ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಕಡಿವಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು, ಜನರು ಕಿಡಿಕಾರುತ್ತಿದ್ದಾರೆ.
ಈಗಾಗಲೇ ಬೀದಿನಾಯಿಗಳ ನಿಯಂತ್ರಣಕ್ಕೆ ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತಂತೆ. ಆದ್ರೆ, ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಇದೀಗ ನಾಯಿಗಳು ಜನರಿಗೆ ಕಚ್ಚಿರುವ ಘಟನೆ ನಡೆದಿದೆ. ಬೀದಿನಾಯಿಗಳನ್ನು ತಡೆಯಬೇಕು. ಇಲ್ಲವಾದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಪುರಸಭಾ ಮಾಜಿ ಸದಸ್ಯ, ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಜಿ. ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.

