ಚಿತ್ರದುರ್ಗದಲ್ಲಿ ವರ್ಷಿತಾ ಎಂಬ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೇಮ ಸಂಬಂಧದ ಹಿಂದೆಯೇ ಈ ದುರ್ಘಟನೆ ನಡೆದಿರುವುದು ದೃಢವಾಗಿದೆ. ವರ್ಷಿತಾ ಎಂಬ ವಿದ್ಯಾರ್ಥಿನಿಯನ್ನು ಆಕೆಯ ಪ್ರೇಮಿ ಚೇತನ್ ಕೊಂದಿದ್ದು ಬೆಳಕಿಗೆ ಬಂದಿದೆ. ವರ್ಷಿತಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದನ್ನು ಸ್ವತಃ ಆತನೇ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಹೌದೂ ಕೊಡಗಿನ ಕೋವೇರಹಟ್ಟಿ ಗ್ರಾಮದ 19 ವರ್ಷದ ವರ್ಷಿತಾ ಎಂಬ ವಿದ್ಯಾರ್ಥಿನಿ ಚಿತ್ರದುರ್ಗದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ದ್ವಿತೀಯ ಬಿ.ಎ. ವ್ಯಾಸಂಗ ಮಾಡ್ತಾಯಿದ್ದಳು. ಆಕೆಯ ಪ್ರೇಮಿ ಚೇತನ್ ಕೊಲೆ ಮಾಡಿ, ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಆಗಸ್ಟ್ 14ರಂದು ಮನೆಗೆ ಹೋಗುವುದಾಗಿ ಹೇಳಿ ಹಾಸ್ಟೆಲ್ ನಿಂದ ಹೊರಟಿದ್ದ ವರ್ಷಿತಾ, ಅದೇ ರಾತ್ರಿ ಮೃತಪಟ್ಟಿದ್ದಾಳೆ. ಆದರೆ, ಆಕೆಯ ಶವವು ಆಗಸ್ಟ್ 20ರಂದು ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಚೇತನ್ ಎಂಬ ಯುವಕ ವರ್ಷಿತಾ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಆದರೆ, ಆಕೆ ಇನ್ನೊಬ್ಬ ಯುವಕರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ತಿಳಿದ ಬಳಿಕ ಚೇತನ್ ತೀವ್ರ ಕೋಪಗೊಂಡಿದ್ದ. ಗೊಂದಲದ ಸಂದರ್ಭ, ಚೇತನ್ ಆಕೆಗೆ ಹೊಡೆದು ನೆಲಕ್ಕೆಯಳೆದಾಡಿ ಸಾವಿಗೆ ಕಾರಣನಾಗಿದ್ದ. ಬಳಿಕ ಪ್ರಕರಣದ ಸಾಕ್ಷ್ಯ ನಾಶಗೊಳಿಸಲು ಶವವನ್ನು ಪೆಟ್ರೋಲ್ ಸುರಿದು ಸುಟ್ಟಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ವರ್ಷಿತಾಳ ಶವ ದೊರಕಿದ ಬಳಿಕ ಆಕೆಯ ಪೋಷಕರು ಮತ್ತು ಸಂಬಂಧಿಕರು ಜಿಲ್ಲಾ ಆಸ್ಪತ್ರೆಗೆ ಧಾವಿಸಿ, ಕಣ್ಣೀರಿಡುತ್ತಾ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಈ ಅಮಾನವೀಯ ಕೃತ್ಯದ ವಿರುದ್ಧ ಎಬಿವಿಪಿ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿದ್ದು, ಅಂಬೇಡ್ಕರ್ ಸರ್ಕಲ್‌ನಿಂದ ಒನಕೆ ಓಬವ್ವ ಸರ್ಕಲ್‌ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಅಂತ ಒತ್ತಾಯಿಸುತ್ತಿದ್ದಾರೆ.