ಮದುವೆಯಾಗದೇ ಒಂಟಿಯಾಗಿ… ಪ್ರಾಣಿಗಳಿಗೆ ಜೀವನ ಕೊಟ್ಟ ವ್ಯಕ್ತಿ!

ಸ್ವಾರ್ಥ ಹೆಚ್ಚುತ್ತಿರುವ ಈ ಪ್ರಪಂಚದಲ್ಲಿ ಮನುಷ್ಯನ ಮೇಲೆ ಮನುಷ್ಯನೇ ನಂಬಿಕೆ ಇಡುವುದು ಕಷ್ಟ. ಆದರೆ ಕೆಲವರು ಪ್ರಾಣಿಗಳೊಂದಿಗೇ ನಿಜವಾದ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಕುದುರೆಮುಖದ ಕಾಡಂಚಿನಲ್ಲಿ ವಾಸಿಸುವ ಮೆಕ್ಯಾನಿಕ್ ರೂಬನ್ ಅವರ ಕಥೆ ಅದಕ್ಕೆ ಜೀವಂತ ಉದಾಹರಣೆ.

ಹನ್ನೊಂದಕ್ಕೂ ಹೆಚ್ಚು ವರ್ಷಗಳಿಂದ ಕಾಡಂದಿಯೊಂದಿಗಿನ ಇವರ ಸ್ನೇಹ ಎಲ್ಲರ ಮನಸೆಳೆಯುತ್ತದೆ. ಇಪ್ಪತ್ತಕ್ಕೂ ಹೆಚ್ಚು ಬೆಕ್ಕುಗಳು, ಮೂವತ್ತಕ್ಕೂ ಹೆಚ್ಚು ನಾಯಿಗಳು, ಜೊತೆಗೆ ನಿತ್ಯ ಬರುತ್ತಿರುವ ಕಾಡು ಹಂದಿಗೂ ರೂಬನ್ ಪ್ರೀತಿಯಿಂದ ಊಟ ಹಾಕುತ್ತಾರೆ. ಪ್ರಾಣಿಗಳ ಪರಿಶುದ್ಧ ಪ್ರೀತಿಯನ್ನು ಅರಿತು, ಮೆಕ್ಯಾನಿಕ್ ಕೆಲಸ ಮಾಡುತ್ತಾ ತಮ್ಮ ದುಡಿಮೆ ಹಣದಲ್ಲೇ ಈ ಜೀವಿಗಳ ಹಸಿವು ನೀಗಿಸುತ್ತಿದ್ದಾರೆ. ಈ ಮನಮುಟ್ಟುವ ದೃಶ್ಯಗಳ ವಿಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ.

sg malenad ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿರುವ ಈ ವಿಡಿಯೋದಲ್ಲಿ, ಕಾಡಾಗಿ ಪರಿವರ್ತಿತವಾದ ಕುದುರೆಮುಖದ ಪ್ರದೇಶದಲ್ಲಿ ರೂಬನ್ ನೆಲೆಸಿ ಪ್ರಾಣಿಗಳಿಗೆ ಆಶ್ರಯ ನೀಡುತ್ತಿರುವುದು ಕಾಣಿಸುತ್ತದೆ. ಕುದುರೆಮುಖ ಅದಿರು ಕಂಪನಿಯು ಮುಚ್ಚಿ ಹೋಗಿರುವ ಸ್ಥಳದಲ್ಲಿ, ರೂಬನ್ ಪ್ರಾಣಿಗಳಿಗೆ ಅಡುಗೆ ಮಾಡಿ ಬಡಿಸುತ್ತಾ ಅವುಗಳೊಂದಿಗೆ ದಿನ ಕಳೆದಿದ್ದಾರೆ. ವಿಶೇಷ ಎಂದರೆ — ಒಂದು ಕಾಡುಹಂದಿಯೇ ಪ್ರತಿದಿನ ಇವರನ್ನು ಹುಡುಕಿಕೊಂಡು ಬರುತ್ತದೆ.

ರೂಬನ್ ಮೊದಲಿದ್ದು ಮುಂಬೈನಲ್ಲಿ. 1979ರಲ್ಲಿ ಕುದುರೆಮುಖಕ್ಕೆ ಬಂದು ಇಲ್ಲಿ ಮೆಕ್ಯಾನಿಕ್ ಕೆಲಸ ಶುರುಮಾಡಿದರು. ಆಗಲೇ ನಾಯಿಗಳು, ಬೆಕ್ಕುಗಳು ಇವರ ಗೆಳೆಯರಾದರು. ಮದುವೆ ಆಗದೇ ಒಬ್ಬರೇ ಬದುಕುತ್ತಿರುವ ಇವರಿಗೆ ಈ ಪ್ರಾಣಿಗಳೇ ಕುಟುಂಬ. ಸ್ವತಃ ಶುದ್ಧ ಸಸ್ಯಾಹಾರಿಗಳು ಆದರೂ, ಪ್ರಾಣಿಗಳಿಗಾಗಿ ಮಾಂಸ, ಮೀನು ತಂದೇ ಅಡುಗೆ ಮಾಡಿ ಊಟ ಹಾಕುತ್ತಾರೆ. ಇವರ ನಿಷ್ಕಪಟ ಪ್ರಾಣಿಪ್ರೀತಿ ಅನೇಕ ಮಂದಿಗೆ ಮಾದರಿಯಾಗಿದೆ.

ಈ ವಿಡಿಯೋ ಈಗಾಗಲೇ 1.1 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಪಡೆದಿದೆ. ಕಾಮೆಂಟ್‌ಗಳಲ್ಲಿ ಜನ ಹೀಗೆ ಹೇಳಿದ್ದಾರೆ- ನಮ್ಮ ಗಾಡಿ ಕೆಟ್ಟಾಗ ಸಹಾಯ ಮಾಡಿದ ಪುಣ್ಯಾತ್ಮ ಇವರೇ. ಆ ಹಂದಿಯ ಕಣ್ಣಿನಲ್ಲಿ ದೈವದಂತೆ ಕಾಣುತ್ತದೆ. ಇವರಂತಹ ಒಳ್ಳೆಯ ಮನಸ್ಸಿನವರಿಗೆ ಸಹಕಾರ ಮಾಡಿದರೆ ದೇವರೇ ಮೆಚ್ಚುತ್ತಾನೆ. ರೂಬನ್ ಅವರ ಕಥೆ ಹೇಳುವುದೇನು ಎಂದರೆ ಪ್ರೀತಿ, ಮಮತೆ, ನಂಬಿಕೆ — ಕೆಲವೊಮ್ಮೆ ಮನುಷ್ಯರಲ್ಲಿ ಅಲ್ಲ, ಪ್ರಾಣಿಗಳಲ್ಲಿ ಹೆಚ್ಚು ದೊರೆಯುತ್ತದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author