Health Tips: ಈ ಪ್ರಪಂಚದಲ್ಲಿ ಅದರಲ್ಲೂ ಭಾರತದಲ್ಲಿ ಜನ ಹೆಚ್ಚು ಇಷ್ಟಪಡುವ ಪೇಯ ಅಂದ್ರೆ ಚಹಾ. ಬೇಕಾದ್ರೆ, ಚಹಾ ಅಂಗಡಿಯ ಮಾಲೀಕರನ್ನು ನೋಡಿ. ಅವರು ಮಾರುತ್ತಿರುವುದು ಚಹಾ ಆದರೂ, ಅವರು ಬದುಕುವ ರೀತಿ, ಯಾವ ಬ್ಯುಸಿನೆಸ್ ಮ್ಯಾನ್‌ಗೂ ಕಡಿಮೆ ಇರುವುದಿಲ್ಲ. ಏಕೆಂದರೆ, ಚಹಾ ಮಾರಾಟವಾಗುವಷ್ಟು ಬೇರೆ ಯಾವ ಪೇಯವೂ ಮಾರಾಟವಾಗುವುದಿಲ್ಲ.
ಅದೇ ರೀತಿ ಕಾಫಿಗೂ ಫ್ಯಾನ್ಸ್ ಇದ್ದಾರೆ. ಕೆಲವರಿಗೆ ದಿನಕ್ಕೆ 5ರಿಂದ 6 ಸಲ ಕಾಫಿ ಸೇವಿಸುವ ಅಭ್ಯಾಸವಿರುತ್ತದೆ. ಚಹಾ ಆಗಲಿ, ಕಾಫಿ ಆಗಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಎಲ್ಲ ಪೇಯಗಳ ಸೇವನೆ ಮಿತವಾಗಿ ಇರಬೇಕು. ನಾವಿಂದು ಕಾಫಿ ಸೇವನೆ ಅತೀಯಾಗಿ ಮಾಡಿದರೆ, ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..
ಕಾಫಿಯಲ್ಲಿ ಕೆಫಿನ್ ಅಂಶ ಇದ್ದು, ಇದರ ಸೇವನೆ ಹೆಚ್ಚಾದರೆ, ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತದೆ. ಅಲ್ಲದೇ, ಹೃದಯದ ಆರೋಗ್ಯ ಚೆನ್ನಾಗಿಲ್ಲವೆಂದಲ್ಲಿ ನೀವು ಕಾಫಿ ಸೇವನೆ ಮಾಡಲೇಬಾರದು. ಕಾಫಿ ಸೇವನೆಯಿಂದ ಹೃದಯದ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ.
ಹೆಚ್ಚು ಕಾಫಿ ಸೇವನೆ ಮಾಡಿದರೆ, ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಕಾಫಿ ಸೇವನೆ ಮಾಡಿದಾಗ, ನಮ್ಮ ದೇಹ ಕ್ರಿಯಾಶೀಲವಾಗುತ್ತದೆ. ಕೆಲಸ ಮಾಡಲು ಚೈತನ್ಯ ಬರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದು ಕಾಫಿ ಸೇವನೆ ಮಾಡಲಾಗುತ್ತದೆ. ಆದರೆ ಅದೇ ಕಾಫೀ ಸೇವನೆ ಅತೀಯಾದರೆ, ನಿದ್ರಾಹೀನತೆ ಉಂಟಾಗುತ್ತದೆ.
ಕಾಫಿ ಕುಡಿಯುವ ಚಟ ಇದ್ದವರಿಗೆ, ತಲೆ ನೋವಾದಾಗ ಕಾಫಿ ಕುಡಿಯಬೇಕು ಎನ್ನಿಸುತ್ತದೆ. ಏಕೆಂದರೆ, ಕಾಫಿ ಕುಡಿಯುವುದು ಚಟವಾದಾಗಲೇ, ಹೆಚ್ಚು ತಲೆ ನೋವು ಬರುತ್ತದೆ. ಅಂಥವರು ತಲೆನೋವಾದಾಗ, ಕಾಫಿ ಕುಡಿಯದೇ, ಬಿಸಿ ನೀರು ಕುಡಿಯಿರಿ. ಸ್ವಲ್ಪ ರೆಸ್ಟ್ ಮಾಡಿ. ಕಾಫಿ, ಮಾತ್ರೆಯ ಸೇವನೆ ಮಾಡಲೇಬೇಡಿ.
ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡಬಾರದು. ಇದರಿಂದ ದೇಹದಲ್ಲಿ ಪಿತ್ತ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದು, ತಿಂಡಿ ತಿನ್ನುವಾಗ ಅಥವಾ ತಿಂಡಿ ತಿಂದ ಬಳಿಕ ಕಾಫಿ ಸೇವನೆ ಮಾಡಿ.