ನವದೆಹಲಿ : ಮತಾಂತರದ ಮಾಸ್ಟರ್ ಮೈಂಡ್ ಉತ್ತರ ಪ್ರದೇಶದ ಸ್ವಯಂ ಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾನಿಂದ ನಡೆದ ಕರ್ಮಕಾಂಡಗಳು ಬಗೆದಷ್ಟು ಬಯಲಾಗುತ್ತಿವೆ. ಅಲ್ಲದೆ ಆತ ಕಳೆದ ಮೂರು ವರ್ಷಗಳಲ್ಲಿ ಹಿಂದೂ ಬಾಲಕಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸುವುದಕ್ಕಾಗಿ 1000ಕ್ಕೂ ಅಧಿಕ ಮುಸ್ಲಿಂ ಪುರುಷರಿಗೆ ಹಣ ನೀಡಿದ್ದಾನೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ಸುದ್ದಿವಾಹಿನಿಯು ಹೊರಹಾಕಿದೆ.
ಇನ್ನೂ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಈಗಾಗಲೇ ಛಂಗೂರ್ ಬಾಬಾ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಅಲ್ಲದೆ ಮತಾಂತರಕ್ಕಾಗಿಯೇ ತನ್ನ ಜಾಲವನ್ನು ಹೆಣೆದಿದ್ದ ಈತ ಇದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 500 ಕೋಟಿ ರೂಪಾಯಿಗಳನ್ನು ಪಡೆದು ಬಡವರು, ವಿಧವೆಯರು ಹಾಗೂ ದುರ್ಬಲ ಮಹಿಳೆಯರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಮತಾಂತರ ದಂಧೆಯನ್ನು ರಾಜಾರೋಷವಾಗಿ ನಡೆಸುತ್ತಿದ್ದ ಎಂಬುವುದರ ಬಗ್ಗೆ ಮಾಹಿತಿ ಇದೆ ಎಂದು ಸುದ್ದಿವಾಹಿನಿ ತಿಳಿಸಿದೆ.
ಲವ್ ಜಿಹಾದ್‌ಗೆ ಹಿಂದೂ ಹುಡುಗಿಯರನ್ನು ಗುರಿಯಾಗಿಸುತ್ತಿದ್ದ. ಇದಕ್ಕಾಗಿ ಮುಸ್ಲಿಂ ಪುರುಷರಿಗೆ ಹಣಕಾಸಿನ ನೆರವು ನೀಡುತ್ತಿದ್ದ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಛಂಗೂರ್ ಬಾಬಾ ಹಾಗೂ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ಳನ್ನು ಅರೆಸ್ಟ್ ಮಾಡಲಾಗಿದೆ. ವಿದೇಶಗಳಿಂದ ಬಂದ ಹಣದ ವ್ಯವಹಾರವನ್ನು ನಸ್ರೀನ್ ನೋಡಿಕೊಳ್ಳುತ್ತಿದ್ದರು. ಏಳು ದಿನಗಳ ಕಾಲದವರೆಗೆ ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ಒಪ್ಪಿಸಲಾಗಿದೆ.
ಇನ್ನೂ ಗುಪ್ತಚರ ದಳ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ವಿದೇಶಿ ಹಣಕಾಸಿನ ಮಾರ್ಗಗಳನ್ನು ಹಾಗೂ ಅಧಿಕ ಸಂಪರ್ಕಗಳನ್ನು ಹುಡುಕಾಡಲು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಛಂಗೂರ್ ಬಾಬಾನ ಮಗ ಮೆಹಬೂಬ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಈಗ ಲಖನೌನ ಜೈಲಿನಲ್ಲಿದ್ದಾನೆ.
ಕಳೆದ ಮೂರು ವರ್ಷಗಳಲ್ಲಿ ಬಾಬಾ,ನೀತು ಮೆಹಬೂಬ್ ಅವರ ಬ್ಯಾಂಕ್ ಖಾತೆಗಳಿಂದ ನಡೆದ ದೊಡ್ಡ ವಹಿವಾಟುಗಳನ್ನು ಭಯೋತ್ಪಾದಕ ನಿಗ್ರಹ ದಳ ತಪಾಸಣೆ ನಡೆಸುತ್ತಿದೆ. ಅಲ್ಲದೆ ಇದುವರೆಗೂ ನಡೆದ ಪ್ರಾಥಮಿಕ ತನಿಖೆಯಲ್ಲಿ ಛಂಗೂರ್ ಬಾಬಾ ತನ್ನ ಮಗನ ಬ್ಯಾಂಕ್ ಖಾತೆಯಿಂದ ಆಸ್ತಿ ಖರೀದಿಸಲು ಮತ್ತು ವಹಿವಾಟು ನಡೆಸಲು ಬಳಸಿಕೊಂಡಿದ್ದು, ಅವನಿಗೆ ಭೂಮಿಯನ್ನು ಮಾರಾಟ ಮಾಡಿದ ಜನರನ್ನು ತನಿಖಾ ಸಂಸ್ಥೆಗಳ ನಿಗಾಕ್ಕೆ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ಶಾರ್ಜಾ, ಯುಎಇಯಲ್ಲಿರುವ ಛಂಗೂರ್‌ನ ಶಂಕಿತ ವಿದೇಶಿ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪ್ರಮುಖವಾಗಿ ಈ ಛಂಗೂರ್ ಬಾಬಾನ ಬಗ್ಗೆ ನಡೆಯತ್ತಿರುವ ತನಿಖೆಯಲ್ಲಿ ತನಿಖಾ ಸಂಸ್ಥೆಗಳಿಗೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರ ಬೀಳುವ ಸಾಧ್ಯತೆಗಳಿವೆ.