ಬಿಹಾರ BJPಯ ನೂತನ ಅಧ್ಯಕ್ಷರನ್ನಾಗಿ ಸಂಜಯ್ ಸರೋಗಿ ಅವರನ್ನು
ಪಕ್ಷ ನೇಮಕ ಮಾಡಿದೆ. BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಈ ನೇಮಕ ಮಾಡಿದ್ದಾರೆಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ABVP ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಸರೋಗಿ, 2001ರಲ್ಲಿ ಬಿಜೆಪ ದರ್ಭಾಂಗ ಘಟಕದ ಅಧ್ಯಕ್ಷರಾಗುವ ಮುನ್ನ ಬಿಜೆಪಿ ಯುವಮೋರ್ಚಾ ಸದಸ್ಯರಾಗಿದ್ದರು. ದರ್ಭಾಂಗ ವಿಧಾನಸಭಾ ಕ್ಷೇತ್ರದಿಂದ 2005ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ ಅವರು ಸತತ 5 ಸಲ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಸರೋಗಿ ಅವರನ್ನು ಇದೇ ಫೆಬ್ರವರಿಯಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಕಂದಾಯ ಮತ್ತು ಭೂಸುಧಾರಣಾ ಖಾತೆ ನೀಡಲಾಗಿತ್ತು. ಅದಾಗ್ಯೂ ಕಳೆದ ತಿಂಗಳು ಬಿಜೆಪಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರೋಗಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದ್ದು ಕುತೂಹಲ ಕೆರಳಿಸಿತ್ತು. ಇದೀಗ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




