ಕರ್ನಾಟಕ ಭಾರತದ ಅತಿದೊಡ್ಡ ರೇಷ್ಮೆ ಉತ್ಪಾದಕ ರಾಜ್ಯ. ಈಗ ಮತ್ತೊಂದು ಐತಿಹಾಸಿಕ ಹೆಗ್ಗಳಿಕೆಯನ್ನು ಪಡೆಯುತ್ತಿದೆ. ರೇಷ್ಮೆ ಸೀರೆಗಳಿಗಾಗಿಯೇ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ, ದೇಶದ ಮೊದಲ ರೇಷ್ಮೆ ಮ್ಯೂಸಿಯಂ ಸ್ಥಾಪನೆಯಾಗುತ್ತಿದೆ. ಈ ಸಂಗ್ರಹಾಲಯವು ಭಾರತದಲ್ಲಿ ರೇಷ್ಮೆಯ ಸಂಪೂರ್ಣ ಇತಿಹಾಸವನ್ನು, ಹುಳುಗಳಿಂದ ಬಟ್ಟೆಯವರೆಗಿನ ಪ್ರತಿ ಹಂತವನ್ನು ಪ್ರದರ್ಶಿಸಲಿದೆ.
ಕೇಂದ್ರ ರೇಷ್ಮೆ ಮಂಡಳಿಯ ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ ನಿರ್ದೇಶಕಿ ಡಾ. ಮಂತ್ರಿರಾ ಮೂರ್ತಿ ತಿಳಿಸಿದ್ದಾರೆ. ಮೈಸೂರಿನ 120 ಎಕರೆ ಪ್ರದೇಶದಲ್ಲಿರುವ ಸಿಎಸ್ಬಿ ಕೇಂದ್ರದಲ್ಲೇ ಈ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ. ರೇಷ್ಮೆ ಹುಳಿನ ಪ್ಯೂಪಾ ಹಂತದಿಂದ ರೇಷ್ಮೆ ದಾರ ತಯಾರಿಕೆಗೆ, ನಂತರ ಬಟ್ಟೆಯ ನೇಯುವ ಪ್ರಕ್ರಿಯೆವರೆಗೆ ಎಲ್ಲವನ್ನು ಇಲ್ಲಿ ನೇರವಾಗಿ ಕಾಣಬಹುದು.
ಈ ಯೋಜನೆಗಾಗಿ ಸಿಎಸ್ಬಿ ಅಧಿಕಾರಿಗಳು ಚೀನಾ ಮತ್ತು ಇಟಲಿಯ ರೇಷ್ಮೆ ಮ್ಯೂಸಿಯಂ ಮಾದರಿಗಳನ್ನು ಅಧ್ಯಯನ ಮಾಡಿದ್ದಾರೆ. ಅಲ್ಲಿನ ಪರಂಪರೆಯ ತಂತ್ರಜ್ಞಾನ ಮತ್ತು ಪ್ರದರ್ಶನ ಶೈಲಿಗಳನ್ನು ಇಲ್ಲಿ ಅಳವಡಿಸುವ ಯೋಜನೆಯಿದೆ. ಭಾರತದಲ್ಲಿನ ಎಲ್ಲಾ ರೇಷ್ಮೆ ಉತ್ಪಾದನಾ ರಾಜ್ಯಗಳಿಂದ ಹಳೆಯ ಸಂಗ್ರಹಗಳು ಹಾಗೂ ಸಾಂಪ್ರದಾಯಿಕ ಮಾದರಿಗಳನ್ನು ಸಂಗ್ರಹಿಸುವ ಕೆಲಸ ಈಗಾಗಲೇ ಆರಂಭವಾಗಿದೆ.
ರೇಷ್ಮೆ ಮ್ಯೂಸಿಯಂ ಮೂಲಕ ಜನರು ನಿಜವಾದ ಮತ್ತು ನಕಲಿ ರೇಷ್ಮೆಯನ್ನು ಗುರುತಿಸುವ ವಿಧಾನವನ್ನೂ ಕಲಿಯಲಿದ್ದಾರೆ. ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯದ ಸಹಕಾರದೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಯೋಜನೆಯಿಂದ ಮೈಸೂರಿನ ರೇಷ್ಮೆ ಪರಂಪರೆಯ ಮಹತ್ವ ಮತ್ತಷ್ಟು ಜಗತ್ತಿನ ಮಟ್ಟಿಗೆ ಬೆಳಗಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

