ಕರ್ನಾಟಕದಲ್ಲಿ ಭಾರೀ ಪ್ರಮಾಣದ ಖನಿಜ ಅನ್ವೇಷಣಾ ಕಾರ್ಯ ಜೋರಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜ್ಯದ 19 ಪ್ರಮುಖ ಸ್ಥಳಗಳಲ್ಲಿ ಒಟ್ಟು 16,350 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ ಮಟ್ಟದ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದರಲ್ಲಿ ಸುಮಾರು 14,000 ಹೆಕ್ಟೇರ್ ಪ್ರದೇಶವನ್ನು ಕೇವಲ ಚಿನ್ನದ ಹುಡುಕಾಟಕ್ಕೆ ಮೀಸಲಿಡಲಾಗಿದೆ.
ಚಿನ್ನದ ಜೊತೆಗೆ ಯುರೇನಿಯಂ, ಬಾಕ್ಸೈಟ್, ತಾಮ್ರ ಸೇರಿದಂತೆ ಅನೇಕ ಪ್ರಮುಖ ಖನಿಜಗಳನ್ನು ಪತ್ತೆಹಚ್ಚುವ ಗುರಿಯುಳ್ಳ ಈ ಕಾರ್ಯಾಚರಣೆ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಅನ್ವೇಷಣೆಯಾಗಲಿದೆ. ಪ್ರಸ್ತುತ ನಡೆಯುತ್ತಿರುವ ಅನ್ವೇಷಣೆಯಲ್ಲಿ, ಹಾವೇರಿ, ಕೊಪ್ಪಳ, ಮಂಡ್ಯ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳ ಕುರುಹುಗಳು ಪ್ರಾಥಮಿಕ ಹಂತದಲ್ಲೇ ದೃಢಪಟ್ಟಿವೆ.
ಗಣಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಪ್ರದೇಶಗಳಲ್ಲಿ ಚಿನ್ನದ ಇರುವಿಕೆ ನಿಖರವಾಗಿದ್ದರೂ, ಅದರ ಪ್ರಮಾಣ ತಿಳಿಯಲು ಇನ್ನೂ ಕಾಲಬೇಕಿದೆ. ಸಂಪೂರ್ಣ ಶೋಧ ಕಾರ್ಯ ಮುಗಿದ ಬಳಿಕವೇ ನಿಖರ ಅಂದಾಜು ನೀಡುವುದು ಸಾಧ್ಯ. ಈ ಬಗ್ಗೆ ಮಾತನಾಡಿರುವ ಗಣಿ ಇಲಾಖೆಯ ಅಧಿಕಾರಿಯೊಬ್ಬರು, ಪ್ರಾಥಮಿಕ ಅಂದಾಜಿನ ಪ್ರಕಾರ ಈ ಸ್ಥಳಗಳಲ್ಲಿ ಚಿನ್ನ ಇರುವುದು ನಿಜ. ಆದರೆ, ಖನಿಜದ ಪ್ರಮಾಣ ಎಷ್ಟಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.
ಸಂಪೂರ್ಣ ಅನ್ವೇಷಣೆ ಮುಗಿದ ನಂತರವೇ ನಮಗೆ ನಿಖರವಾದ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ. ಸದ್ಯ ಕರ್ನಾಟಕದಲ್ಲಿ ಹಟ್ಟಿ ಚಿನ್ನದ ಗಣಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಒಂದು ಕಾಲದಲ್ಲಿ ಜಗತ್ಪ್ರಸಿದ್ಧವಾಗಿದ್ದ ಕೋಲಾರದ ಚಿನ್ನದ ಗಣಿ ಅಂದ್ರೇ ಕೆಜಿಎಫ್ ಸದ್ಯಕ್ಕೆ ಮುಚ್ಚಿದೆ. ಈ ಹೊಸ ಶೋಧ ಯಶಸ್ವಿಯಾದರೆ, ರಾಜ್ಯದಲ್ಲಿ ಚಿನ್ನದ ಉತ್ಪಾದನೆಗೆ ಹೊಸ ಜೀವ ಬಂದಂತಾಗುತ್ತದೆ.
ಈ 19 ಸ್ಥಳಗಳಲ್ಲದೇ, ಗಣಿ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಚಿನ್ನ, ತಾಮ್ರ ಹಾಗೂ ಇತರೆ ಖನಿಜಗಳಿಗಾಗಿ ವಿಚಕ್ಷಣಾ ಸಮೀಕ್ಷೆ ನಡೆಸಲು ಮತ್ತೆ 52 ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟ, ವಿಜಯನಗರ, ಚಾಮರಾಜನಗರ, ಶಿವಮೊಗ್ಗದ ಹೊಳೆಹೊನ್ನೂರು ಹಾಗೂ ಕಲಬುರಗಿಯಂತಹ ಪ್ರದೇಶಗಳು ಸೇರಿವೆ.
ಈ ಅನೇಕ ಸ್ಥಳಗಳು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಸದ್ಯಕ್ಕೆ ಅಲ್ಲಿ ಪರೀಕ್ಷೆ ನಡೆಸಲು ಅನುಮತಿಗಾಗಿ ಕಾಯಲಾಗುತ್ತಿದೆ. ಇದು ಕೇವಲ ಪರೀಕ್ಷೆಗೆ ಮಾತ್ರ ಅನುಮತಿಯಾಗಿದ್ದು, ಗಣಿಗಾರಿಕೆಗಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

