ಗಣೇಶ ವಿಸರ್ಜನೆಯ ಗಲಾಟೆ, ಕಲ್ಲು ತೂರಾಟಕ್ಕೆ ತುತ್ತಾದ ಮದ್ದೂರು ನಿಶ್ಯಬ್ಧವಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ರೂ ಮದ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತೆ ಇದೆ. ಸೆಪ್ಟೆಂಬರ್ 10ರ ಬೆಳಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಸೆಪ್ಟೆಂಬರ್ 7ರ ರಾತ್ರಿ ನಡೆದ ಕಲ್ಲು ತೂರಾಟದ ಬಳಿಕ, ಹಿಂದೂ ಸಂಘಟನೆಗಳ ಕಿಚ್ಚು ಸ್ಫೋಟಗೊಂಡಿದೆ. 144 ಸೆಕ್ಷನ್ ಜಾರಿಯಲ್ಲಿದ್ರೂ ನಿನ್ನೆ ಸಾವಿರಾರು ಜನರು ಸೇರಿದ್ರು. ಮದ್ದೂರು ಪಟ್ಟಣದಲ್ಲಿ ಕಲ್ಲು ತೂರಿದವರ ವಿರುದ್ಧ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮತ್ತೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಲೇಬೇಕಾಯ್ತು.
ಸೆಪ್ಟೆಂಬರ್ 9 ಅಂದ್ರೆ ಇವತ್ತು ಮದ್ದೂರು ಬಂದ್‌ಗೆ ಹಿಂದೂ ಸಂಘಟನೆಗಳು ಕರೆ ಕೊಡಲಾಗಿತ್ತು. ಆದ್ರೆ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕಲ್ಲು ತೂರಾಟ ನಡೆಸಿದವರು ಮತ್ತು ಕುಮ್ಮಕ್ಕು ಕೊಟ್ಟವರ ಮೇಲೆ, ಬೇಲ್ ಆಗದ ರೀತಿ ಐಪಿಸಿ ಸೆಕ್ಷನ್ ಹಾಕಿ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ರು. ಹೀಗಾಗಿ ಬಂದ್ ವಾಪಸ್ ಪಡೆಯಲಾಗಿತ್ತು. ಆದರೂ ಮದ್ದೂರು ಪಟ್ಟಣದಲ್ಲಿ ಇವತ್ತು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಮದ್ದೂರಿನ ಪೇಟೆಬೀದಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ- ವಹಿವಾಟುಗಳು ಶುರುವಾಗುತ್ತಿದ್ದವು. ಆದ್ರೆ ಇಂದು ಎಲ್ಲಾ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿದ್ದಾರೆ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಹೊರತುಪಡಿಸಿ, ಯಾವುದೇ ಅಂಗಡಿಗಳು ಓಪನ್ ಆಗಿಲ್ಲ.
ಮದ್ದೂರು ಪಟ್ಟಣದಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಪೇಟೆ ಬೀದಿಯ ರಸ್ತೆಯೊಂದ್ರಲ್ಲೇ ಡಿಎಆರ್ ಪೊಲೀಸರು, ಕೆಎಸ್‌ಆರ್‌ಪಿ ತುಕುಡಿಗಳನ್ನು ನಿಯೋಜಿಸಲಾಗಿದೆ. ಪಟ್ಟಣದಾದ್ಯಂತ 800ಕ್ಕೂ ಹೆಚ್ಚು ಪೊಲೀಸರನ್ನು ಹಾಕಲಾಗಿದೆ. ಎಸ್‌ಪಿ ಮಲ್ಲಿಕಾರ್ಜನ ಬಾಲದಂಡಿ, ಎಎಸ್‌ಪಿ ಇಡೀ ಪಟ್ಟಣದಾದ್ಯಂತ ರೌಂಡ್ಸ್ ಹಾಕುತ್ತಿದ್ದಾರೆ.
144 ಸೆಕ್ಷನ್ ಜಾರಿಯಲ್ಲಿದ್ರೂ ಶಾಂತಿಯುತ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಆದ್ರೆ, ಹೋರಾಟ, ಪ್ರತಿಭಟನೆಗಳಿಗೆ ಪೊಲೀಸರು ಅನುಮತಿ ನೀಡಿಲ್ಲ. ಸೆಪ್ಟೆಂಬರ್ 10 ಅಂದ್ರೆ ಬುಧವಾರ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಗೆ ಪ್ಲಾನ್ ಮಾಡಲಾಗಿದೆ. ರಾಜ್ಯ ಬಿಜೆಪಿ ನಾಯಕರ ನಿಯೋಗ ಮದ್ದೂರಿಗೆ ಭೇಟಿ ನೀಡಲು ಮುಂದಾಗಿದೆ. ಮದ್ದೂರಿನಲ್ಲಿ ಗಣೇಶ ವಿಸರ್ಜನೆಗೆ ಹಿಂದೂ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ.