ಅಧಿಕಾರದ ಚುಕ್ಕಾಣಿಗಾಗಿ ಸಿದ್ದು ಸೀಕ್ರೆಟ್‌ ಟಾಸ್ಕ್!

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್‌ ಬೆಂಗಳೂರು ಗದ್ದುಗೆ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ. ಉತ್ತಮ ಆಡಳಿತದ ಜೊತೆಗೆ ನಗರಾಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಬೆಂಗಳೂರಿನ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರೊಂದಿಗೆ ಸಿಎಂ ಚರ್ಚೆ ನಡೆಸಿದರು. ಜನಸೇವೆಯ ಸುಧಾರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಶಾಸಕರ ನಿರೀಕ್ಷೆಗಳು, ಬೆಂಗಳೂರಿನ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತಂತೆ ಸಮಾಲೋಚನೆ ನಡೆಯಿತು. ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ, ಜನರ ಅಳಲುಗಳಿಗೆ ತಕ್ಷಣ ಸ್ಪಂದಿಸಿ ನೆರವಾಗುವಂತೆ ಸಿಎಂ ಸೂಚನೆ ನೀಡಿದರು. ಸುಧಾರಿತ ಆಡಳಿತ ಸೇವೆ ಜನರಿಗೆ ತಲುಪುವಂತೆ ಪ್ರಾಧಿಕಾರದಡಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಐದು ಹೊಸ ಪಾಲಿಕೆಗಳ ಚುನಾವಣೆ ಕುರಿತಂತೆ ಸಭೆಯಲ್ಲಿ ವಿಶೇಷವಾಗಿ ಚರ್ಚಿಸಲಾಯಿತು. ಎಲ್ಲ ಪಾಲಿಕೆಗಳಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಗುರಿಯನ್ನು ಹೊಂದಿ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕೆಂದು ಸಿಎಂ ಕರೆ ನೀಡಿದರು. ಸರ್ಕಾರ ಮತ್ತು ಜೆಬಿಎ ಪ್ರಾಧಿಕಾರದ ಸುಧಾರಣಾ ಕ್ರಮಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದಕ್ಕೂ ಒತ್ತು ನೀಡಬೇಕು ಎಂದು ತಿಳಿಸಿದರು.

ಪ್ರದೇಶವಾರು ಪಾಲಿಕೆಗಳಿಗೆ ಕೃಷ್ಣ ಬೈರೇಗೌಡ, ಬಿ.ಎಸ್‌. ಸುರೇಶ್‌, ಕೆ.ಜೆ. ಜಾರ್ಜ್‌, ರಾಮಲಿಂಗಾರೆಡ್ಡಿ, ದಿನೇಶ್‌ ಗುಂಡೂರಾವ್‌ ಮತ್ತು ಜಮೀರ್‌ ಅಹಮದ್‌ ಖಾನ್‌ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಸಂಬಂಧಪಟ್ಟ ಸಚಿವರು ನಿರಂತರ ಮೇಲ್ವಿಚಾರಣೆ ನಡೆಸಿ ಸುಗಮ ಆಡಳಿತ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಸೂಚಿಸಿದರು. ಬೆಂಗಳೂರಿನ ವರ್ಚಸ್ಸು ಹೆಚ್ಚಿಸಲು ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದಾಗಿ ಭರವಸೆ ನೀಡಿದ ಅವರು, ಸಚಿವರು ಹಾಗೂ ಶಾಸಕರು ಒಟ್ಟಾಗಿ ಕೆಲಸ ಮಾಡಿ ಪಕ್ಷ ಮತ್ತು ಸರ್ಕಾರದ ಬಲವನ್ನು ಹೆಚ್ಚಿಸಬೇಕೆಂದು ಹೇಳಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author