ಒಂದು ತೆಂಗಿನಕಾಯಿಗೆ ₹5,71,001 ರೂಪಾಯಿ!

ದೇವರ ಮೇಲಿನ ಭಕ್ತಿ, ನಂಬಿಕೆ, ಹಾಗೂ ಸಂಪ್ರದಾಯಗಳಿಗೆ ಇಂದಿಗೂ ಭಾರೀ ಮಹತ್ವ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರೆಯ ಈ ಘಟನೆ ಜೀವಂತ ಉದಾಹರಣೆ ನೀಡಿದೆ. 2025 ರ ಜಾತ್ರೆಯಲ್ಲಿ ದೇವರಿಗೆ ಅರ್ಪಿಸಲಾದ ತೆಂಗಿನಕಾಯಿ ಹರಾಜಿನಲ್ಲಿ ಭಕ್ತನೊಬ್ಬ ಬರೋಬ್ಬರಿ ₹5,71,001 ರೂ. ನೀಡಿದ ಸಂಗತಿ ಎಲ್ಲರನ್ನೂ ಅಚ್ಚರಿಗೆಡುಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ವಿವಿಧ ಆಚರಣೆಗಳ ನಂತರ ಮಾಳಿಂಗರಾಯ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆಯ ಕೊನೆ ಹಂತದಲ್ಲಿ ದೇವರಿಗೆ ಅರ್ಪಿಸಲಾದ ವಸ್ತುಗಳ ಹರಾಜು ಮಾಡುವ ಪರಂಪರೆ ಅನುಸರಿಸಲಾಗಿದೆ. ಈ ಹರಾಜಿನಲ್ಲಿ ದೇವರ ಗದ್ದುಗೆ ಮೇಲೆ ಪೂಜಿಸಲಾದ ತೆಂಗಿನಕಾಯಿ ಪ್ರಮುಖ ಆಕರ್ಷಣೆಯಾಗಿ ಕಂಗೊಳಿಸಿತು.

ಹರಾಜು ಆರಂಭದಲ್ಲಿ 100 ರೂಪಾಯಿನಿಂದ ಪ್ರಾರಂಭವಾಗಿ ಕ್ರಮೇಣ ಹೆಚ್ಚುತ್ತಾ ಹೋಗಿ ಕೊನೆಗೆ ತಲುಪಿದ ಬೆಲೆ ₹5,71,001 ರೂ.! ಈ ಭಾರಿ ಮೊತ್ತಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಮಾಹಾವೀರ ಹರಕೆ ಎಂಬ ಭಕ್ತ ತೆಂಗಿನಕಾಯಿಯನ್ನ ಖರೀದಿಸಿ ಮಾಳಿಂಗರಾಯನ ಮೇಲಿನ ತಮ್ಮ ಭಕ್ತಿಯನ್ನು ಸಾರಿದ್ದಾರೆ.

ಹರಾಜಿನಲ್ಲಿ ತ್ರಿಕೋನ ಸ್ಪರ್ಧೆಯೂ ನಡೆದಿದೆ. ಮಾಹಾವೀರ ಹರಕೆ ಅವರನ್ನು ಎದುರಿಸಿದವರು ಚಿಕ್ಕಲಕಿ ಗ್ರಾಮದ ಮುದುಕಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರ. ಕೊನೆಗೂ ತೀವ್ರ ಸ್ಪರ್ಧೆಯ ನಂತರ ಮಾಹಾವೀರ ಹರಾಜಿನ ತೆಂಗಿನಕಾಯಿ ಗೆದ್ದಿದ್ದಾರೆ.

ಆದರೆ ಇದು ಮಾಹಾವೀರ ಅವರ ಮೊದಲ ಭಾರಿ ಅಲ್ಲ. ಹಿಂದೆಯೂ ಅವರು ಇದೇ ತೆಂಗಿನಕಾಯಿ ಹರಾಜಿನಲ್ಲಿ ₹6,50,001 ರೂಪಾಯಿಗೆ ತೆಂಗಿನಕಾಯಿ ಪಡೆದ ಅನುಭವವಿದೆ. ಭಕ್ತನ ಭಾವನೆ, ದೇವರ ಮೇಲಿನ ನಂಬಿಕೆ, ಹಾಗೂ ಸಂಪ್ರದಾಯಗಳ ಶಕ್ತಿ ಎಷ್ಟು ಪ್ರಬಲವಾಗಿವೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

About The Author