ಆಸ್ತಿ ವಿಚಾರಕ್ಕೆ ಹೆತ್ತ ತಂದೆ, ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಅಣ್ಣ 50 ವರ್ಷದ ಮಂಜುನಾಥ್, 47 ವರ್ಷದ ಮೋಹನ್ ಇಬ್ಬರು ಮದುವೆಯಾಗಿರಲಿಲ್ಲ. ಮಂಜುನಾಥ್ ತಂದೆ ದೇವೇಗೌಡ, ತಾಯಿ ಜಯಮ್ಮ ಜೊತೆ ವಾಸವಾಗಿದ್ರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ರೂ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ರು.
ತಂದೆ ದೇವೇಗೌಡ ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಾಟದಿಂದ ಬಂದ ಹಣವನ್ನು ನೀಡಿಲ್ಲ ಅಂತಾ ಮೋಹನ್ ಪದೇ ಪದೇ ಗಲಾಟೆ ಮಾಡ್ತಿದೆ. ಇದೇ ವಿಚಾರಕ್ಕೆ ಈ ಬಾರಿಯೂ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿ, ಮಲಗಿದ್ದ ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಎಚ್ಚರಗೊಂಡ ತಂದೆ ತಡೆಯಲು ಮುಂದಾಗಿದ್ರು. ಈ ವೇಳೆ ತಂದೆಯ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿಯ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಮನೆಯಿಂದ ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಅಮ್ಮ, ರಾತ್ರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ತಂದೆ, ಸಹೋದರನನ್ನ ಕೊಲೆ ಮಾಡಿ ಮನೆಯ ಮತ್ತೊಂದು ಭಾಗದಲ್ಲಿ ಮೋಹನ್ ಮಲಗಿದ್ದ. ನನಗೆ ಏಟಾಗಿದೆ ಬಂದು ಆಸ್ಪತ್ರೆಗೆ ಸೇರಿಸು ಅಂತಾ ಅಕ್ಕನಿಗೆ ಫೋನ್ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಅಕ್ಕ ಮನೆಗೆ ಬಂದಾಗ, ತಂದೆ-ಅಣ್ಣನ ಶವ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೋಹನ್ ನನ್ನ ಪೊಲೀಸರು ಬಂಧಿಸಿದ್ದಾರೆ.