National News: ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿ ತಂದಿದ್ದ,ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿದ್ದ ರಾಮೋಜಿ ರಾವ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಂದ ತೀವ್ರವಾಗಿ ಬಳಲುತ್ತಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಅವರು ಸಾಕಷ್ಟು ಆರೋಗ್ಯ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡುತ್ತಲೇ ಬಂದಿದ್ದರು. ಜೂನ್ 5 ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗಿನ ಜಾವ 4:50 ಕ್ಕೆ ನಿಧನರಾಗಿದ್ದಾರೆ.
ಮಾಧ್ಯಮ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ರಾಮೋಜಿ ರಾವ್ ಅವರು ಸಿನಿಮಾ ಕ್ಷೇತ್ರದಲ್ಲಿ ಹಲವು ಅತ್ಯುತ್ತಮ ಚಿತ್ರಗಳ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು. ಅದೂ ಅಲ್ಲದೆ ರಾಮೋಜಿ ಫಿಲಂ ಸಿಟಿ ದೇಶದಲ್ಲೇ ಅತ್ಯುತ್ತಮ ಚಿತ್ರ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದರು.
ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು. 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ದಿನಪತ್ರಿಕೆ ಆರಂಭಿಸಿದ್ದರು.ಈನಾಡು ಶುರುವಾಗಿ ನಾಲ್ಕೇ ವರ್ಷಗಳಲ್ಲಿ ಓದುಗರ ಅಚ್ಚುಮೆಚ್ಚಿನ ದಿನಪತ್ರಿಕೆಯಾಯಿತು. ಅದಾದ ನಂತರ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು.
ರಾಮೋಜಿ ರಾವ್ ಅವರು ಕೈಗೊಂಡ ಪ್ರತಿಯೊಂದು ಯೋಜನೆಯೂ ಇಂದು ಇತಿಹಾಸ ನಿರ್ಮಿಸಿವೆ! ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ ವರ್ಕ್, ರಮಾ ದೇವಿ ಪಬ್ಲಿಕ್ ಶಾಲೆ, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಷನ್, ಡಾಲ್ಫಿನ್ಸ್ ಹೋಟೆಲ್ಸ್.. ಹೀಗೆ ರಾಮೋಜಿ ರಾವ್ ಅವರ ಉದ್ಯಮ ಸಾಹಸಗಳು ಒಂದೆರಡಲ್ಲ!
1996 ರಲ್ಲಿ ರಾಮೋಜಿ ರಾವ್ ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು.ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. 1996ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ.
ರಾಮೋಜಿ ರಾವ್ ಅವರು ತೆಲುಗು ರಾಜಕೀಯದಲ್ಲೂ ಸಕ್ರಿಯ ಪಾತ್ರ ವಹಿಸಿದ್ದರು. ರಾಜಕೀಯ ನಾಯಕರಿಗೆ ಮಹತ್ವದ ಸಲಹೆಗಳನ್ನ ನೀಡುವ ಮೂಲಕ ಮಾರ್ಗದರ್ಶಿಯಾಗಿದ್ದರು. ಭಾರತ ಸರ್ಕಾರವು ರಾಮೋಜಿ ರಾವ್ ಅವರಿಗೆ ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣ ಪುರಸ್ಕಾರವನ್ನು 2016ರಲ್ಲಿ ಪ್ರಧಾನ ಮಾಡಿತ್ತು. ಮಾಧ್ಯಮ ಕ್ಷೇತ್ರದಲ್ಲಿ ಇವರು ನೀಡಿದ ಅಪಾರ ಕೊಡುಗೆ ಗುರುತಿಸಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ರಾಮೋಜಿ ರಾವ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಬಿಜಿಪಿ ಮುಖ್ಯಸ್ಥ ಹಾಗೂ ಪಾರ್ಟಿ ಸಂಸದ ಜಿ ಕೃಷ್ಣನ್ ರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಸಂತಾಪ ಕೋರಿದ್ದಾರೆ.