ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭವಿಷ್ಯವಾಣಿ ನುಡಿದಿದ್ದಾರೆ. ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಜಗತ್ತೇ ತಿರುಗಿ ನೋಡುವಂತಹ ಆಘಾತ ಭಾರತಕ್ಕಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದಕ್ಕಾದರೂ ಆಗಬಹುದು. ಎರಡನ್ನೂ ಸೇರಿಸಿ ಹೇಳಿದ್ದು ಎನ್ನುವ ಮೂಲಕ ದೇಶ ನಾಯಕ ಸ್ಥಾನದಲ್ಲಿರುವವರಿಗೆ ಆಪತ್ತು ಕಾದಿದೆ ಎಂಬರ್ಥದಲ್ಲಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕೋಡಿ ಶ್ರೀಗಳ ಈ ಮಾತು ಭಾರೀ ಸಂಚಲನ ಮೂಡಿಸಿದೆ.
ಮೈಸೂರಲ್ಲಿ ಮಾತನಾಡಿರುವ ಕೋಡಿ ಶ್ರೀಗಳು ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಆದರೆ ಅದಕ್ಕೆ ಪರಿಹಾರ ಮಾಡಿಕೊಂಡರೆ ಸರಿಯಾದೀತು. ಎಂಬ ಪರಿಹಾರದ ಮಾರ್ಗೋಪಾಯದ ಸಾಧ್ಯತೆಯನ್ನೂ ಕೂಡ ತಿಳಿಸಿದ್ದಾರೆ.
ಈ ಹಿಂದೆ ಅಂದರೆ ಜೂನ್‌ನಲ್ಲಿ ದೇಶದಲ್ಲಿ ಮೇಘ ಸ್ಫೋಟ, ನಿರೀಕ್ಷೆಗೆ ಮೀರಿ ನೋವು ಕಾಡಲಿದೆ ಎಂದು ಹೇಳಿದ್ದರು. ಇದೀಗ ಭಾರತದಲ್ಲಿ ದೊಡ್ಡ ಆಘಾತ ಆಗುವ ಲಕ್ಷಣ ಇದೆ. ವಿಶ್ವವೇ ತಿರುಗಿ ನೋಡುವಂತಹ ಆಘಾತ ಆಗಲಿದೆ ಎಂದು ಕೂಡ ಹೇಳಿದ್ದಾರೆ ಶ್ರೀಗಳು. ಸಂಕ್ರಾಂತಿ ಮೇಲೆ ಒಂದು ಭವಿಷ್ಯ, ಯುಗಾದಿಯ ಮೇಲೆ ಒಂದು ಭವಿಷ್ಯ ನಿರ್ಧಾರ ಆಗಲಿದೆ. ಯುಗಾದಿ ನಂತರ ಮಳೆ, ಬೆಳೆ ಬಗ್ಗೆ ನಿರ್ಧಾರ ಆಗುತ್ತದೆ. ಸಂಕ್ರಾಂತಿಯಲ್ಲಿ ರಾಜ್ಯಕ್ಕೆ ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಇಂಥಹ ವ್ಯವಹಾರಿಕ ವಿಷಯಗಳು ಬರುತ್ತವೆ. ಹೀಗಾಗಿ ಸಂಕ್ರಾಂತಿವರೆಗೆ ಏನೂ ತೊಂದರೆ ಇಲ್ಲ, ಸಂಕ್ರಾಂತಿ ಫಲವನ್ನು ನೋಡಿ ಹೇಳಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಯುದ್ಧದ ಪರಿಸ್ಥಿತಿಗಳು ಜಾಗತಿಕವಾಗಿ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ. ಕದನ ವಿರಾಮಗಳು ಆಗಿದ್ದರೂ, ಮನಸ್ಸು ನಿಲ್ಲಬೇಕಲ್ವಾ ಮನಸ್ಸು ಕಟ್ಟುವ ಕೆಲಸ ಆದ್ರೆ ಯುದ್ಧ ನಿಲ್ಲುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ