ಬೆಂಗಳೂರು : 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಕಿತ್ತೊಗೆದು ಎನ್ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವ ತಂತ್ರಗಾರಿಕೆ ರೂಪಿಸಿದೆ. ಸ್ಟಾಲಿನ್ ಮಣಿಸಿ ಕೇಸರಿ ಬಾವುಟ ಹಾರಿಸುವ ಗುರಿಯನ್ನು ಹೊಂದಿರುವ ಮೋದಿ- ಶಾ ಜೋಡಿಗೆ ಈ ಚುನಾವಣೆ ಪ್ರತಿಷ್ಠ ಪಣವಾಗಿದೆ. ಅದರಂತೆಯೇ ಸದಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಿಎಂ ಸ್ಟಾಲಿನ್ ಕೂಡ ಮತ್ತೊಮ್ಮೆ ಅಧಿಕಾರ ಪಡೆಯುವ ಧಾವಂತದಲ್ಲಿದ್ದಾರೆ. ಆದರೆ ಈ ನಡುವೆಯೇ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದ್ದು, ಸ್ಟಾಲಿನ್ಗೆ ಶಾಕ್ ನೀಡಿದೆ.
ಈ ಮೊದಲು ಕೇರಳದಲ್ಲಿ ಸಮೀಕ್ಷೆ ಕೈಗೊಂಡಿದ್ದ ಖಾಸಗಿ ಸಮೀಕ್ಷಾ ಸಂಸ್ಥೆ ವೋಟ್ ವೈಬ್ ಇದೀಗ ತಮಿಳುನಾಡು ಜನರ ನಾಡಿಮಿಡಿತ ತಿಳಿದು ತನ್ನ ಸರ್ವೇಯನ್ನು ಮುಂದುವರೆಸಿದ್ದು, ಆರಂಭಿಕ ಕೆಲ ವಿವರಗಳನ್ನು ಬಹರಂಗಗೊಳಿಸಿದೆ. ಸದ್ಯದ ಪ್ರಕಾರ ಸಮೀಕ್ಷೆಯಲ್ಲಿ ಭಾಗವಹಿಸಿರುವ ಶೇಕಡಾ 32ರಷ್ಟು ಜನರು ಸಿಎಂ ಸ್ಟಾಲಿನ್ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಆಡಳಿತ ವಿರೋಧಿಯ ಭಾವನೆಯನ್ನು ಒತ್ತಿ ಹೇಳಿದ್ದಾರೆ. ಶೇಕಡಾ 29ರಷ್ಟು ಮಹಿಳೆಯರೂ ಸಹ ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ. ಅಲ್ಲದೆ ಶೇಕಡಾ 34ರಷ್ಟು ಪುರುಷರೂ ಸಹ ಸ್ಟಾಲಿನ್ ವಿರುದ್ಧ ಆಡಳಿತ ವಿರೋಧಿಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇರುವಾಗಲೇ ಸ್ಟಾಲಿನ್ಗೆ ಮತದಾರರು ಶಾಕ್ ನೀಡಿದ್ದಾರೆ.
ಏನಿದೆ ಜನರ ನಾಡಿಮಿಡಿತ?
ಸ್ಟಾಲಿನ್ ಆಡಳಿತದ ಪರ
ಶೇಕಡಾ 17.9ರಷ್ಟು ಜನರು
ಸ್ಟಾಲಿನ್ ಆಡಳಿತದ ವಿರುದ್ಧ
25 ರಿಂದ 34 ವರ್ಷದೊಳಗಿನ ಶೇಕಡಾ 40ರಷ್ಟು ಜನ
18 ರಿಂದ 24 ವರ್ಷದೊಳಗಿನ ಶೇಕಡಾ 29ರಷ್ಟು ಜನ
45 ರಿಂದ 54 ವರ್ಷ ವಯಸ್ಸಿನ ಶೇಕಡಾ 32ರಷ್ಟು ಜನ
ತಟಸ್ಥ ನಿಲುವು
ಶೇಕಡಾ 15ರಷ್ಟು ಪುರುಷರು
ಶೇಕಡಾ18ರಷ್ಟು ಮಹಿಳೆಯರು
ಆದರೆ ಇದೇ ಸ್ಟಾಲಿನ್ ಆಡಳಿತದ ಬಗ್ಗೆ ಶೇಕಡಾ 17.9ರಷ್ಟು ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಅಚ್ಚರಿಯೆಂದರೆ ಶೇಕಡಾ 15 ರಷ್ಟು ಪುರುಷರು ಹಾಗೂ ಶೇಕಡಾ 18ರಷ್ಟು ಮಹಿಳೆಯರು ಪರ ಅಥವಾ ವಿರೋಧದ ಅಭಿಪ್ರಾಯಗಳಿಂದ ದೂರ ಉಳಿದು ತಟಸ್ಥ ನಿಲುವನ್ನು ತಾಳಿದ್ದಾರೆ. ಅಲ್ಲದೆ ಮುಖ್ಯವಾಗಿ 25 ರಿಂದ 34 ವರ್ಷದೊಳಗೆ ಇರುವ ಶೇಕಡಾ 40ರಷ್ಟು ಯುವಕರು ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಇನ್ನೂ 18 ರಿಂದ 24 ವರ್ಷದೊಳಗಿನ ಶೇಕಡಾ 29ರಷ್ಟು ಜನರೂ ಸಹ ಸ್ಟಾಲಿನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲ. ಉಳಿದಂತೆ 45 ರಿಂದ 54 ವರ್ಷ ವಯಸ್ಸಿನ ಶೇಕಡಾ 32ರಷ್ಟು ಮಂದಿ ಸದ್ಯದ ಆಡಳಿತಾರೂಢ ಸರ್ಕಾರದ ವಿರುದ್ಧವಾಗಿ ನಿಂತಿದ್ದಾರೆ.
ಇನ್ನುಳಿದಂತೆ 45 ರಿಂದ 54 ವರ್ಷದ ಶೇಕಡಾ 22 ರಷ್ಟು ಜನರು ಡಿಎಂಕೆ ಹಾಗೂ ಸ್ಟಾಲಿನ್ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ 25 ರಿಂದ 34 ವರ್ಷ ವಯಸ್ಸಿನ ಯುವಕರ ಪೈಕಿ ಶೇಕಡಾ 12 ರಷ್ಟು ಜನರು ಮಾತ್ರ ಸರ್ಕಾರದ ಪರವಾಗಿದ್ದಾರೆ. ಪ್ರಮುಖವಾಗಿ ಸಮೀಕ್ಷೆಯ ಶೇಕಡಾವಾರು ಅಂಲಿ-ಅಂಶಗಳನ್ನು ಗಮನಿಸಿದಾಗ ತಮಿಳುನಾಡಿನ ಡಿಎಂಕೆ ಸರ್ಕಾರ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿರುವುದು ಕಂಡುಬರುತ್ತಿದೆ.
ಅಲ್ಲದೆ ಸಮೀಕ್ಷೆಯ ಇನ್ನೊಂದು ಮುಖ್ಯ ಅಂಶವೆಂದರೆ ಅದು ಶಾಸಕರ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಸಮೀಕ್ಷೆಯಲ್ಲಿ ಭಾಗವಹಿಸಿರುವ ಶೇಕಡಾ 38.9ರಷ್ಟು ಜನರು ಶಾಸಕರು ಕಾರ್ಯವೈಖರಿ ಕುರಿತು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಶೇಕಡಾ 42ರಷ್ಟು ಪುರುಷರು ಮತ್ತು ಶೇಕಡಾ 36ರಷ್ಟು ನಾರಿಯರು ಶಾಸಕರು ಕೆಲಸ ಮಾಡಿಲ್ಲ, ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಬೇಸರ ಹೊರಹಾಕಿದ್ದಾರೆ.
ಇನ್ನೂ ವಯಸ್ಸಿನ ವಿಚಾರದಲ್ಲಿ ಜನಾಭಿಪ್ರಾಯವನ್ನು ಗಮನಿಸಿದಾಗ 55ವರ್ಷ ಮೇಲ್ಪಟ್ಟವರೇ ಅಧಿಕವಾಗಿ ಶಾಸಕರ ಕೆಲಸವು ತೃಪ್ತಿ ತಂದಿಲ್ಲ ಎಂದು ಶೇಕಡಾ 48ರಷ್ಟು ಮಂದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ 45 ರಿಂದ 54 ವರ್ಷದೊಳಗಿನ ಶೇಕಡಾ 42ರಷ್ಟು ಜನರು ಕೂಡ ಇದೇ ಭಾವನೆ ಇಟ್ಟುಕೊಂಡಿದ್ದಾರೆ. ಕೇವಲ ಶೇಕಡಾ 10 ರಿಂದ 11ರಷ್ಟು ಮಂದಿ ಮಾತ್ರ ಶಾಸಕರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಶಾಸಕರು ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ಹಿಂದೆ ಇದ್ದಾರೆ. ಅಭಿವೃದ್ದಿ ಕಾರ್ಯಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದೆ, ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ ಎಂಬ ನಾಡಿಮಿಡಿತ ಜನರದ್ದಾಗಿದೆ.
ಪ್ರಮುಖವಾಗಿ ಸಮೀಕ್ಷೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಯ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ಶೇಕಡಾ 38ರಷ್ಟು ಮಹಿಳೆಯರು ಹಾಗೂ ಶೇಕಡಾ 45ರಷ್ಟು ಪುರುಷರು ಉತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನುಳಿದಂತೆ ಶೇಕಡಾ 37ರಷ್ಟು ಮಹಿಳೆಯರು ಮತ್ತು ಶೇಕಡಾ 32ರಷ್ಟು ಪುರುಷರು ಮೈತ್ರಿ ಬೇಡ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಸಮೀಕ್ಷೆಯಲ್ಲಿನ ಅಂಕಿ- ಅಂಶಗಳನ್ನು ಗಮನಿಸಿದಾಗ ಸ್ಟಾಲಿನ್ ಪದೇ ಪದೇ ಪ್ರಾದೇಶಿಕತೆ, ಸ್ಥಳೀಯ ಅಸ್ಮಿತೆಯ ಉಳಿವಿಗಾಗಿ ಹೋರಾಡುತ್ತಿದ್ದೇನೆ ಎಂದು ಹೇಳುತ್ತಿದ್ದರೂ, ಆದರೆ ಜನ ಮಾತ್ರ ಅವರನ್ನು ಸ್ವೀಕರಿಸಿಲ್ಲ ಎನ್ನುವುದನ್ನು ಈ ಸಮೀಕ್ಷೆಯು ತಿಳಿಸುತ್ತದೆ. ಚುನಾವಣೆಗೂ ಮುನ್ನ ಹೊರಬಿದ್ದಿರುವ ಈ ಸಮೀಕ್ಷೆಯು ಡಿಎಂಕೆ ಹಾಗೂ ಸ್ಟಾಲಿನ್ ನಾಯಕತ್ವಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.