ಸಿಹಿಯಾದ ಉದ್ಯಮ ಕಹಿಯಾಯ್ತು : ಕಬ್ಬಿನ ಬೆಲೆಯ ದೊಡ್ಡ ಯುದ್ಧ

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಮೇಲೂ ಒತ್ತಡ ತೀವ್ರಗೊಳ್ಳುತ್ತಿದೆ. ಬೇಡಿಕೆ ಈಡೇರಿಸುವಂತೆ ರೈತರು ಪಟ್ಟು ಹಿಡಿದಿದ್ದು, ಮಾತುಕತೆಗೂ ನಿರಾಕರಣೆ ಮಾಡಿದ್ದಾರೆ. ಈ ನಡುವೆ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.

ಈಗಾಗಲೇ ಪ್ರತಿಭಟನಾ ನಿರತ ಸ್ಥಳಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಎಚ್‌.ಕೆ .ಪಾಟೀಲ್ ತೆರಳಿದ್ದರು. ಈ ವೇಳೆ ಸಂಧಾನ ಮಾತುಕತೆಗೆ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಬೆಂಗಳೂರಿಗೆ ಬರುವಂತೆ ರೈತ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. ಅದರೆ ಸಚಿವರ ಆಹ್ವಾನವನ್ನು ರೈತರು ತಿರಸ್ಕಾರ ಮಾಡಿದ್ದಾರೆ. ಇದೇ ವೇಳೆ ಸಂಪುಟ ಸಭೆಯಲ್ಲಿ ಚರ್ಚಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಕಬ್ಬು ಟನ್‌ಗೆ 3500 ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಆದರೆ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಈ ದರವನ್ನು ರೈತರಿಗೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಎಥನಾಲ್ ಸೇರಿದಂತೆ ಉಪ ಉತ್ಪನ್ನಗಳಿಂದ ಬರುವ ಆದಾಯದ ಭಾಗವನ್ನು ರೈತರಿಗೆ ನೀಡುತ್ತಿಲ್ಲ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ದರ ನಿಗದಿ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ, ಕಬ್ಬು ಬೆಳೆಗಾರರ ಹೋರಾಟ ಪ್ರಮುಖ ಚರ್ಚಾ ವಿಚಾರ ಆಗುವ ಸಾಧ್ಯತೆ ಇದೆ. ಪ್ರತಿ ಟನ್ ಕಬ್ಬುಗೆ 3500 ದರ ನಿಗದಿಗೊಳಿಸಿ ಅರೆಯುವಿಕೆ ಆರಂಭಿಸಬೇಕೆಂದು, ರೈತ ಹೋರಾಟಗಾರರು ಇಟ್ಟಿರುವ ಬೇಡಿಕೆಯ ಬಗ್ಗೆ ಚರ್ಚೆ ಆಗಲಿದೆ. ಗುರುವಾರ ಸಂಜೆಯೊಳಗೆ ದರ ನಿಗದಿಗೊಳಿಸುವಂತೆ ರೈತರು ಡೆಡ್ ಲೈನ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗುವ ಸಾಧ್ಯತೆ ಇದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author