ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ ಕರಾಳ ಮಂಗಳವಾರ ಎಂಬಂತೆ ದೇವರ ಪಾದವೇ ಸೇರಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಮ್ಮರ್ಗಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೀದರ್ ಜಿಲ್ಲೆಗೆ ಸೇರಿದ ನಾಲ್ವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಹುಲಜಂತಿ ಮಾಳಿಂಗರಾಯ ಸ್ವಾಮೀಜಿ ದರ್ಶನಕ್ಕಾಗಿ ತೆರಳಿದ್ದ ಐವರ ತಂಡ, ದರ್ಶನ ಮುಗಿಸಿ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.
ಕಾರುಗಳು ಒಂದಕ್ಕೊಂದು ಪರಸ್ಪರ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಶಿವಕುಮಾರ್, ರತಿಕಾಂತ ಸೇರಿದಂತೆ ಇನ್ನಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಒಬ್ಬರನ್ನು ಉಮ್ಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರು ಬೀದರ್ ತಾಲೂಕಿನ ಖಾಶೆಂಪೂರ್ ಗ್ರಾಮದ ಸ್ನೇಹಿತರು ಎಂದು ತಿಳಿದುಬಂದಿದೆ.
ಅದಷ್ಟೇ ಅಲ್ಲದೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದ ಬಳಿ ಕಾರು ಮತ್ತು ಟಂಟಂ ವಾಹನ ನಡುವೆ ಅಪಘಾತ ಸಂಭವಿಸಿದೆ. ಟಂಟಂ ವಾಹನದಲ್ಲಿದ್ದ ಬಾಷಾ ಸಾಬ್(45), ಶಂಕ್ರಪ್ಪ(41) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪಾವಳಿಯ ಉತ್ಸವದ ನಡುವೆಯೇ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ಈ ಸರಣಿ ಅಪಘಾತಗಳು ಕರುಣಾಜನಕ ದೃಷ್ಯವನ್ನು ಮೂಡಿಸಿವೆ. ವಾಹನ ಚಾಲಕರಿಗೆ ಸರಿಯಾದ ಮುನ್ನೆಚ್ಚರಿಕೆ, ವೇಗ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಬೇಕಾಗಿದೆ.
ವರದಿ : ಲಾವಣ್ಯ ಅನಿಗೋಳ