ಕಾರಿನಲ್ಲಿ ಇನ್ಸ್‌ಪೆಕ್ಟರ್‌ ಸಜೀವ ದಹನ

ಧಾರವಾಡದಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಒಬ್ಬರು ಸಜೀವ ದಹನವಾಗಿದ್ದಾರೆ. ಕಳೆದ ನವೆಂಬರ್‌ 25ರಂದು, ಕೇವಲ 10 ದಿನಗಳ ಹಿಂದಷ್ಟೇ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಕೂಡ, ರೋಡ್‌ ಆಕ್ಸಿಡೆಂಟ್‌ನಲ್ಲಿ ದುರ್ಮರಣಕ್ಕೀಡಾಗಿದ್ರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂಥದ್ದೇ ದುರ್ಘಟನೆ ಮರುಕಳಿಸಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ, ಐ20 ಕಾರಲ್ಲಿ ಪ್ರಯಾಣಿಸುತ್ತಿದ್ರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕ್ಷಣಮಾತ್ರದಲ್ಲಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಡೋರ್‌ ಲಾಕ್‌ ಓಪನ್‌ ಆಗಿಲ್ಲ. ನೋಡನೋಡುತ್ತಿದ್ದಂತೆ ಇಡೀ ಕಾರು ಧಗಧಗಿಸಿತ್ತು. ಹೊರಬರಲಾರದೇ ಕಾರೊಳಗೆ ಇನ್ಸ್‌ಪೆಕ್ಟರ್‌ ಸುಟ್ಟು ಕರಕಲಾಗಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದೆ. PS ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡ್ತಿದ್ರು. ಗದಗದಲ್ಲಿ ಅವರ ಕುಟುಂಬ ವಾಸವಾಗಿತ್ತು. ಕುಟುಂಬಸ್ಥರನ್ನ ಭೇಟಿ ಮಾಡಲು ಹೋಗುತ್ತಿದ್ರು. ಆದ್ರೆ ವಿಧಿಯಾಟ ಬೇರೆಯೇ ಆಗಿತ್ತು. ಕುಟುಂಬಸ್ಥರ ಭೇಟಿಗೆ ಹೋಗ್ತಿದ್ದವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಇನ್ನು, ಕಾರಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಅಗ್ನಿಶಾಮಕ ದಳ, ಖಾಕಿ ಪಡೆ ಬರುವಷ್ಟರಲ್ಲಿ ಬೆಂಕಿಯಲ್ಲಿ ಇನ್ಸ್‌ಪೆಕ್ಟರ್‌ ಬೆಂದು ಹೋಗಿದ್ರು.

About The Author