ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಇಂದು ಮನಕಲುಕುವ ಬಸ್ ದುರಂತ ಸಂಭವಿಸಿದೆ. ಭಾರೀ ಮಂಜಿನಿಂದಾಗಿ ದಾರಿ ಕಾಣದೇ ಬಸ್ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆ ಇಂದು ಬೆಳಗ್ಗೆ ಅರಣ್ಯ ಪ್ರದೇಶದ ತಿರುವಿನಲ್ಲಿ ನಡೆದಿದೆ. ಬಸ್ಸಿನಲ್ಲಿ ಒಟ್ಟು 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಸೇರಿದಂತೆ ಒಟ್ಟು 38 ಮಂದಿ ಪ್ರಯಾಣಿಸುತ್ತಿದ್ದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮಂಜು ಗಟ್ಟಿಯಾಗಿ ಆವರಿಸಿದ್ದರಿಂದ ತಿರುವು ಸ್ಪಷ್ಟವಾಗದೇ, ಚಾಲಕ ನಿಯಂತ್ರಣ ಕಳೆದುಕೊಂಡಿರುವುದು ದುರಂತಕ್ಕೆ ಪ್ರಮುಖ ಕಾರಣವೆಂದು ಪೊಲೀಸರು ಅಂದಾಜಿಸಿದ್ದಾರೆ.
ಅಪಘಾತದ ನಂತರ ತಕ್ಷಣ ರಕ್ಷಕ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಏಳು ಮಂದಿಯನ್ನು ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸಿನಲ್ಲಿದ್ದವರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿ ಇರುವ ಶ್ರೀರಾಮ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಿಕರು ಎಂದು ತಿಳಿದುಬಂದಿದೆ.

ಈ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ಅಲ್ಲೂರಿಯಲ್ಲಿ ಸಂಭವಿಸಿದ ಅಪಘಾತ ಬಹಳ ನೋವುಂಟು ಮಾಡಿದೆ. ಈ ಸಂಕಷ್ಟದಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳಿವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಇದೇ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಘಟನೆಯ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.
ವರದಿ : ಲಾವಣ್ಯ ಅನಿಗೋಳ




